ಬೆಂಗಳೂರು: ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕಾರಣಿ ಸದಸ್ಯ ಡಾ.ಸೈಯದ್ ನಾಸಿರ್ ಹುಸೇ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ಯಾತೀತ ತತ್ವದ ನಿಲುವು ಇರುವವರೆಲ್ಲ ಇದಕ್ಕೆ ಪ್ರಯತ್ನ ಮಾಡಬೇಕು ಎಂದರು.
ಸಂವಿಧಾನ ಉಳಿಯಬೇಕು. ಸಂವಿಧಾನ ಒಪ್ಪಿದ್ದೇವೆ, ಜಾತ್ಯಾತೀತ ರಾಷ್ಟ್ರ ಮಾಡುವುದಾಗಿ ಹೇಳಿದ್ದೇವೆ. ಭಾರತ ಅನೇಕ ಜಾತಿ, ಧರ್ಮ ಬಹುತ್ವ ಇರುವ ರಾಷ್ಟ್ರ. ಅದಕ್ಕಾಗಿ ಯೂನಿಟಿ ಇನ್ ಡೈವರ್ಸಿಟಿ ಕಾಣುತ್ತಿದ್ದೇವೆ. ಇದರಲ್ಲಿ ನಂಬಿಕೆ ಇಟ್ಟಿರುವವರಲ್ಲಿ ನಾಸಿರ್ ಹುಸೇನ್ ಅಂತ ಹೇಳಿದರ ಅತಿಶಯೋಕ್ತಿಯಲ್ಲ. ಸೆಕ್ಯೂಲರ್ ಆಗಿದ್ದರೆ ಮಾತ್ರ ಈ ದೇಶ ಉಳಿಯಲು ಸಾಧ್ಯ. ಕುವೆಂಪು ಅವರು ಒಂದು ಮಾತು ಹೇಳುತ್ತಾರೆ ಎಂದರು.
ಈ ದೇಶದಲ್ಲಿ ಯಾವುದೇ ಧರ್ಮದ ಮಗುವಾಗಿ ಹುಟ್ಟಿದರೂ ವಿಶ್ವ ಮಾನವನಾಗಿ ಹುಟ್ಟುತ್ತಾರೆ. ಆಮೇಲೆ ಅಲ್ಪ ಮಾನವನಾಗಿ ಆಗುತ್ತಾರೆ. ಬಿಜೆಪಿಯವರು ಅಲ್ಪಮಾನವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಎಂದೂ ಕೂಡ ಸಂವಿಧಾನ ದ್ಯೇಯೋದ್ದೇಶ ಉಳಿಸಿಕೊಂಡು ಬರುತ್ತಿದೆ. ಸಂವಿಧಾನ ರಚನೆ ಮಾಡಿದಾಗ ಕಾಂಗ್ರೆಸ್ ದೊಡ್ಡ ಜವಾಬ್ದಾರಿ ನೀಡಿದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನ ಒಪ್ಪಿ ಹೊರ ತರುತ್ತದೆ ಎಂದರು.
ಇಂಡಿಯಾ ಬದಲು ಭಾರತ ಅಂತ ಹೆಸರು ಬದಲಾಯಿಸಲು ಮುಂದಾಗಿದ್ದಾರೆ. ನೀವು ನಾವು ಎಲ್ಲರೂ ಇಂಡಿಯಾದವರು, ಭಾರತೀಯರೂ ಕೂಡ ಹೌದು. ಜನರನ್ನ ದಾರಿ ತಪ್ಪಿಸು ಕೆಲಸ ಮಾಡುತ್ತಿದ್ದಾರೆ. ಇಂಡಿಯಾ ಬ್ರಿಟೀಷರು ಇಟ್ಟ ಹೆಸರು ಅಂತ ಹೇಳುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಅಂದವರ್ಯಾರು? ನರೇಂದ್ರ ಮೋದಿ ಮಾತ್ರ ಭಾರತೀಯನಾ? ನಾವು, ನೀವೆಲ್ಲಾ ಇಂಡಿಯಾದವರಲ್ವಾ? ನಮ್ಮ ನಡುವೆ ಹುಳಿ ಇಂಡುವ ಕೆಲಸ ಮಾಡುತ್ತಿದ್ದಾರೆ. ಇವರ ತಂತ್ರ ಫಲಿಸಲ್ಲ ಎಂದರು.
ನಾವು ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಮಾಡಲು ಬದ್ಧರಾಗಿದ್ದೇವೆ. ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡಲ್ಲ. ಕೋಮು ಗಲಭೆ ಆಗದಂತೆ ಹತ್ತಿಕ್ಕುತ್ತೇವೆ. ಪ್ರತಿ ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಕೋಮು ಸಂಘರ್ಷ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಯಾರಾದರು ಕೋಮು ಸಂಘರ್ಷಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಆದರೆ ನಿಮ್ಮ ಮೇಲೆ ಯಾವುದೇ ರೀತಿಯ ಪರಿಣಾಮ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ ೧೩೫ ಕ್ಷೇತ ಗೆದ್ದಿದೆ. ಇದಕ್ಕೆ ಅಲ್ಪಸಂಖ್ಯಾತರ ಪಾತ್ರ ಬಹುಮುಖ್ಯ. ಹೀಗಾಗಿ ಅಲ್ಪಸಂಖ್ಯಾತರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.