ಚಿತ್ರದುರ್ಗ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯಪಥದಲ್ಲಿ ನಿರ್ಮಿಸುತ್ತಿರುವ ಅಮೃತವನಕ್ಕೆ ಇಡೀ ದೇಶದ ಮೃತ್ತಿಕೆ ಅರ್ಪಣೆ ಮಾಡುವ ಉದ್ದೇಶದಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಇಂದು ಸೋಮವಾರ ವಿಶೇಷ ಪೂಜೆ ಸಲ್ಲಿಸಿ ದೇಗುಲದ ಆವರಣದ ಮಣ್ಣು ಸಂಗ್ರಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಪೇಕ್ಷೆಯಂತೆ ನನ್ನ ಮಣ್ಣು ನನ್ನ ದೇಶ ಪರಿಕಲ್ಪನೆ ಅಡಿ ದೇಶಭಕ್ತಿ ಪಸರಿಸಿ, ಮಣ್ಣಿನ ಶಕ್ತಿಯನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ದೇಶದ ಸೇನಾನಿಗಳು ಮಾಡಿರುವ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ಮಾರಕ ನಿರ್ಮಿಸಿ ಅಮೃತವನವನ್ನು ವಿಶ್ವಕ್ಕೆ ಸಮರ್ಪಣೆ ಮಾಡಲಾಗುತ್ತಿದೆ. ದೇಶಕ್ಕಾಗಿ ತ್ಯಾಗ ಮಾಡಿದವರ ಮನೆಗಳಿಗೆ ಭೇಟಿ ನೀಡಿ ಅವರ ಅನುಭವಗಳನ್ನು ಆಲಿಸುವ ಮೂಲಕ ಯುವಕರಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಿಂದಲೂ ಪವಿತ್ರವಾದ ಮಣ್ಣನ್ನು ಸಂಗ್ರಹಿಸುತ್ತಿದ್ದೇವೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಮನೆಯಿಂದಲೂ ಮಣ್ಣು ಸಂಗ್ರಹಿಸುತ್ತಿದ್ದು, ೪೫ ದಿನಗಳ ಕಾಲ ಈ ಕಾರ್ಯ ನಡೆಯಲಿದೆ. ಅ. ೨೫ ಕ್ಕೆ ದೆಹಲಿಗೆ ಮೃತ್ತಿಕೆ ತಲುಪಿಸುತ್ತೇವೆ. ಅಲ್ಲಿ ನಿರ್ಮಾಣ ಆಗುತ್ತಿರುವ ಅಮೃತವನಕ್ಕೆ ಸಮರ್ಪಣೆ ಮಾಡಲಾಗುತ್ತದೆ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಮುಖಂಡರಾದ ಮಲ್ಲಿಕಾರ್ಜುನ, ಸಂಪತ್ ಕುಮಾರ್, ಮೋಹನ್, ವೆಂಕಟೇಶ್ ಯಾದವ್, ನವೀನ್ ಚಾಲುಕ್ಯ ಇದ್ದರು.