ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ೨ರಲ್ಲಿ ವಿದೇಶಿ ವಿಮಾನಗಳ ಹಾರಾಟ ಇಂದಿನಿಂದ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಇಂದಿನಿಂದ ಟರ್ಮಿನಲ್ ೨ಗೆ ಶಿಫ್ಟ್ ಆಗಿದೆ. ೫ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾರ್ಡನ್ ಟರ್ಮಿನಲ್ ಅತ್ಯಾಧುನಿಕ ತಂತ್ರಜ್ಞಾನವುಳ್ಳದ್ದಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಿದ್ದರು.
ಜನವರಿ ೧೫ರಿಂದ ಕೆಲ ದೇಶಿಯ ವಿಮಾನಗಳ ಹಾರಾಟ ಮಾತ್ರ ಟಿ೨ನಲ್ಲಿ ಆರಂಭಿಸಲಾಗಿತ್ತು. ಕೆಲವು ಕೆಲಸಗಳು ಬಾಕಿ ಇದ್ದ ಕಾರಣ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಇರಲಿಲ್ಲ. ಇದೀಗ ಸಂಪೂರ್ಣ ಕಾಮಗಾರಿ ಮುಗಿಸಿ ಎಲ್ಲಾ ವಿದೇಶಿ ವಿಮಾನಗಳ ಹಾರಾಟ ಟರ್ಮಿನಲ್ ೨ನಲ್ಲಿ ಇಂದಿನಿಂದ ಆರಂಭವಾಗಿದೆ. ಇಂದು ಬೆಳಗ್ಗೆ ೧೦.೪೫ಕ್ಕೆ ಟರ್ಮಿನಲ್ ೨ ಮೊದಲ ವಿದೇಶಿ ವಿಮಾನವಾಗಿ ಸೌದಿ ಏರ್‌ಲೈನ್ಸ್ ವಿಮಾನ ಆಗಮಿಸಿತು. ಈ ವಿಮಾನದಲ್ಲಿ ಬಂದ ೨೧೨ ಪ್ರಯಾಣಿಕರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಇನ್ನು, ಹಳೆಯ ಟರ್ಮಿನಲ್ ೧ ದೇಶಿಯ ವಿಮಾನಗಳ ಹಾರಾಟಕ್ಕೆ ಮೀಸಲಿಡಲಾಗಿದೆ. ಟರ್ಮಿನಲ್ ೨ ಅನ್ನು ಉದ್ಯಾನವನದಂತೆ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ರೂಪುಗೊಂಡಿದೆ. ಇಲ್ಲಿ ಸಸ್ಯ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. ೧೮೦ ಅಳಿವಿನಂಚಿನಲ್ಲಿರುವ ಸಸ್ಯಗಳು, ೬೦೦-೮೦೦ ವರ್ಷದ ಹಳೆಯ ಮರಗಳು, ೬೨೦ ಸ್ಥಳೀಯ ಸಸಿಗಳು, ೧೫೦ ಪಾಮ್ ಜಾತಿಯ ಸಸ್ಯಗಳು, ೭,೭೦೦ ಕಸಿ ಮಾಡಿದ ಮರಗಳು, ೯೬ ಕಮಲ, ೧೦೦ ಲಿಲ್ಲಿ ಜಾತಿಯ ಸಸ್ಯಗಳನ್ನು ಟರ್ಮಿನಲ್‌ನಲ್ಲಿ ನೋಡಬಹುದು. ಸಸ್ಯಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವೂ ಕಾಣಸಿಗುತ್ತದೆ.
ನೂತನ ಟರ್ಮಿನಲ್ ೨ ಸುಮಾರು ೨ ಲಕ್ಷ ೫೫ ಸಾವಿರದ ೬೬೧ ಚದರ ಮೀಟರ್ ಹೊಂದಿದೆ. ಪ್ರತ್ಯೇಕ ಆಗಮನ ಮತ್ತು ನಿರ್ಗಮನಕ್ಕೂ ವ್ಯವಸ್ಥೆ ಮಾಡಲಾಗಿದೆ. ವಾರ್ಷಿಕ ೨೫ ಮಿಲಿಯನ್ ಪ್ರಯಾಣಿಕರು ಸಂಚರಿಸಬಹುದಾದ ದೊಡ್ಡ ಟರ್ಮಿನಲ್ ಇದಾಗಿದೆ. ಜೊತೆಗೆ ೫ಜಿ ನೆಟ್ವರ್ಕ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಚೆಕ್ ಇನ್, ಬ್ಯಾಗೇಜ್ ಡ್ರಾಪ್ ಕೌಂಟರ್ ವ್ಯವಸ್ಥೆ ಅಳವಡಿಸಲಾಗಿದೆ. ಇಂದು ವಿದೇಶಿ ವಿಮಾನಗಳ ಹಾರಾಟಕ್ಕೆ ಏರ್‌ಪೋರ್ಟ್ ಎಂಡಿ ಹರಿಮಾರನ್ ಚಾಲನೆ ನೀಡಿದರು.
