ಹೊಸೂರು: ಕೆ.ಆರ್.ನಗರ ತಾಲೂಕಿನ ಗಳಿಗೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್.ವಿ.ದೇವರಹಟ್ಟಿ, ಉಪಾಧ್ಯಕ್ಷರಾಗಿ ಎಂ.ಜಿ.ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಕಛೇರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಇಬ್ಬರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸದೇ ಇದ್ದುದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅವಿನಾಶ್ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಡಿ.ಕೆ.ಜಾಣೇಗೌಡ, ರಾಜೇಗೌಡ, ಮಧುಕಿರಣ್, ರಾಮಕೃಷ್ಣೇಗೌಡ(ರಾಂಕಿ), ಮಲ್ಲೇಶ್‌ಮೂರ್ತಿ, ಎಂ.ಎಸ್.ಮಹದೇವ್, ಸುಜೇಂದ್ರ, ರಾಜಮ್ಮ, ವೇದಾವತಿ, ಕೆ.ಸಿ.ಪ್ರಕಾಶ್, ಸಂಘದ ಸಿಇಒ ಪುಟ್ಟೇಗೌಡ ಇದ್ದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.
ಅಧ್ಯಕ್ಷ ಅಮಿತ್.ವಿ.ದೇವರಹಟ್ಟಿ ಮಾತನಾಡಿ, ಸಂಘ ಸ್ಥಾಪನೆಗೊಂಡು ೧೦೯ ವರ್ಷಗಳಾಗಿದ್ದು, ಸಂಘದ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗಿದ್ದು, ಉಳಿದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ಉದ್ಘಾಟಿಸಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ೫ ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ, ಸಂಘದ ರೈತ ಸದಸ್ಯರಿಗೆ ಹೆಚ್ಚು ಸಾಲ ಸೌಲಭ್ಯ ನೀಡಲು ನಿರ್ಧರಿಸಲಾಗಿದ್ದು ಈ ತಿಂಗಳ ಕೊನೆಯಲ್ಲಿ ನಡೆಯುವ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುತ್ತದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗಣ್ಣ, ಅಡಗೂರು ಗ್ರಾ.ಪಂ. ಅಧ್ಯಕ್ಷ ಮಹದೇವ್, ಮಾಜಿ ಅಧ್ಯಕ್ಷ ರಾಜೇಗೌಡ, ಮಾಜಿ ಉಪಾಧ್ಯಕ್ಷ ದೊಡ್ಡಕೊಪ್ಪಲುರವಿ, ಮುಖಂಡರಾದ ಎ.ಎಂ.ತಮ್ಮಣ್ಣ, ರಾಹುಲ್, ಮರಿಗೌಡ, ಸಂಪತ್‌ಕುಮಾರ್, ಗೋವಿಂದೇಗೌಡ, ಬಸವರಾಜು, ಯೋಗೀಶ್, ಕುಮಾರ್ ಮತ್ತಿತರರು ಹಾಜರಿದ್ದರು.