ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಸಾಗುವ ಮಾರ್ಗದ ರಸ್ತೆ, ಫುಟ್‌ಪಾತ್ ಸರಿಪಡಿಸುವ ಜತೆಗೆ ಅರಮನೆ ಸುತ್ತಮುತ್ತಲಿರುವ ಐದು ಪ್ರಮುಖ ವೃತ್ತಗಳಿಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲು ಮಹಾನಗರಪಾಲಿಕೆ ಮುಂದಾಗಿದೆ.
ನಾಡಹಬ್ಬ ದಸರಾ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಮೇಯರ್ ಶಿವಕುಮಾರ್ ಅಧಿಕಾರಿಗಳೊಂದಿಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೆ ಸಾಗುವ ಮಾರ್ಗ, ಸಬ್‌ವೇ, ವೃತ್ತಗಳನ್ನು ವೀಕ್ಷಣೆ ಮಾಡಿ ಹಲವಾರು ವಿಚಾರಗಳ ಬಗ್ಗೆ ಚಿರ್ಚಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಾಮರಾಜ ವೃತ್ತ, ಚಾಮರಾಜೇಂದ್ರ ಒಡೆಯರ್ ವೃತ್ತ, ಗಾಂಧಿವೃತ್ತ, ಅಂಬೇಡ್ಕರ್ ಪ್ರತಿಮೆ ಇರುವ ವೃತ್ತಗಳಿಗೆ ಗಾರ್ಡನಿಂಗ್ ಮಾಡುವ ಜತೆಗೆ ಶಾಶ್ವತ ದೀಪಾಲಂಕಾರ ಮಾಡುವುದು. ವಾರದ ರಜಾ ದಿನವಾದ ಶನಿವಾರ ಮತ್ತು ಭಾನುವಾರ ಅರಮನೆಯಲ್ಲಿ ದೀಪಾಲಂಕಾರದ ಸಮಯದಲ್ಲಿ ಈ ವೃತ್ತಗಳ ದೀಪಾಲಂಕಾರ ಇರಲಿದೆ. ವೃತ್ತಗಳಿಗೆ ಸರಿಯಾಗಿ ಗಾರ್ಡನಿಂಗ್ ಮಾಡದೆ ಇರುವುದರಿಂದ ಅಂದದ ಸ್ವರೂಪ ಕಳಾಹೀನವಾಗುತ್ತಿದ್ದು, ಆಕರ್ಷಣೆಯ ರೀತಿಯಲ್ಲಿ ಹೂವಿನ ಕುಂಡಗಳನ್ನು ಜೋಡಿಸಿ ನಿರ್ವಹಣೆ ಮಾಡುವುದಕ್ಕೆ ಸೂಚಿಸಲಾಯಿತು.
ಅರಮನೆಯಿಂದ ದೊಡ್ಡಕೆರೆ ಮೈದಾನದ ವಸ್ತುಪ್ರದರ್ಶನಕ್ಕೆ ಹೋಗುವ ಮತ್ತು ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಬ್‌ವೇಗೆ ನೀರು ನುಗ್ಗಿ ಸಾರ್ವಜನಿಕರು ಓಡಾಡಲು ಸಾಧ್ಯವಾಗದೆ ಬೀಗ ಹಾಕಿರುವುದನ್ನು ಪರಿಶೀಲಿಸಿ ಕೂಡಲೇ ಸಬ್‌ವೇಗಳಿಗೆ ಎರಡು ಮೋಟಾರ್‌ಗಳನ್ನು ಅಳವಡಿಸಿ ನೀರನ್ನು ಪಂಪ್ ಮಾಡಬೇಕು. ಹೊಸದಾಗಿ ಸುಣ್ಣ ಬಣ್ಣ ಬಳಿದು ಅಂದಗೊಳಿಸಿ ಸಬ್‌ವೇ ವಿನ್ಯಾಸ ಬದಲಿಸುವುದಕ್ಕೆ ಇಂಜಿನಿಯರ್‌ಗೆ ಮೇಯರ್ ಸೂಚಿಸಿದರು.
ಚಿಕ್ಕಗಡಿಯಾರ ವೃತ್ತದ ಬಳಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಸುತ್ತಲೂ ದೀಪದ ವ್ಯವಸ್ಥೆ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಸಾರ್ವಜನಿಕರು ತಿರುಗಾಡಲು ಅನುವು ಮಾಡಿಕೊಡುವಂತೆ ಈಗಿನಿಂದಲೇ ಪ್ಲಾನ್ ಮಾಡಬೇಕೆಂದು ಹೇಳಿದರು. ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಅಧೀಕ್ಷಕ ಅಭಿಯಂತರೆ ಸಿಂಧು, ಕಾರ್ಯಪಾಲಕ ಅಭಿಯಂತರ ಸತ್ಯಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.
ಫುಟ್‌ಪಾತ್ ದುರಸ್ತಿಪಡಿಸಿ ಬ್ಯಾರಿಕೇಡ್: ನಗರ ಬಸ್ ನಿಲ್ದಾಣದಿಂದ ಹಾರ್ಡಿಂಜ್ ವೃತ್ತ, ಹಾರ್ಡಿಂಜ್ ವೃತ್ತದಿಂದ ಪುರಭವನ, ಕರ್ಜನ್ ಪಾರ್ಕ್‌ವರೆಗೆ, ಕೆ.ಆರ್.ವೃತ್ತದಿಂದ ಆಯುರ್ವೇದ ವೃತ್ತದವರೆಗೆ ಸಾಗುವ ಮಾರ್ಗದ ರಸ್ತೆಯ ಫುಟ್‌ಪಾತ್‌ನಲ್ಲಿ ಅಳವಡಿಸಿರುವ ಸ್ಲ್ಯಾಬ್‌ಗಳಲ್ಲಿ ಕೆಲವು ಒಡೆದು ಹೋಗಿ, ಮುರಿದುಬಿದ್ದಿರುವುದನ್ನು ಬದಲಿಸಿ ಹೊಸದಾಗಿ ಹಾಕಬೇಕು. ಅದೇ ರೀತಿ ಹಾಳಾಗಿರುವ ಬ್ಯಾರಿಕೇಡ್‌ಗಳನ್ನು ಹೊಸದಾಗಿ ಹಾಕಲಾಗುತ್ತದೆ. ನಗರ ಬಸ್ ನಿಲ್ದಾಣದ ಸುತ್ತಮುತ್ತಲ ಫುಟ್‌ಪಾತ್ ಹಾಳಾಗಿ ಗ್ರಾನೈಟ್ ಚಪ್ಪಡಿ ಕಲ್ಲು ಕಳಚಿ ಸಾರ್ವಜನಿಕರು ಓಡಾಡುವುದಕ್ಕೆ ತುಂಬಾ ತೊಂದರೆಯಾಗಿರುವುದನ್ನು ಮನಗಂಡ ಮೇಯರ್ ಸಾರ್ವಜನಿಕರ ಅನುಕೂಲಕ್ಕೆ ಮಾಡಿದ ವ್ಯವಸ್ಥೆಯನ್ನು ನಿರ್ವಹಣೆ ಮಾಡದಿದ್ದರೆ ಪ್ರಯೋಜನವಾಗಲ್ಲ. ಕೂಡಲೇ ದುರಸ್ತಿಪಡಿಸುವಂತೆ ತಾಕೀತು ಮಾಡಿದರು.
ಸಬ್‌ವೇನಲ್ಲಿ ನೀರು ನಿಲ್ಲದಂತೆ ಮಳೆ ಬಂದಾಗ ಪಂಪ್ ಮಾಡುವುದಕ್ಕೆ ಮತ್ತು ಮತ್ತಷ್ಟು ದೀಪಗಳನ್ನು ಅಳವಡಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡು ಕಾಮಗಾರಿ ಆರಂಭಿಸಬೇಕು. ರೈಲ್ವೆ ನಿಲ್ದಾಣದ ಬಳಿ ಇರುವ ಡಾ.ಬಾಬೂಜಿ ವೃತ್ತವನ್ನು ಕೂಡ ಸಿಂಗಾರ ಮಾಡಿ ದೀಪಾಲಂಕಾರ ಮಾಡಬೇಕು. ಮುಂದಿನ ಒಂದು ವಾರದೊಳಗೆ ಎಲ್ಲ ಸಿದ್ಧತಾ ಕಾರ್ಯ ಪ್ರಾರಂಭಿಸಿ.
-ಶಿವಕುಮಾರ್, ಮೇಯರ್