ರಾಜಸ್ಥಾನ : ಭರತ್‌ಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಹಂತ್ರಾ ಬಳಿಯ ಜೈಪುರ-ಆಗ್ರಾ ಹೆದ್ದಾರಿಯಲ್ಲಿ ಟ್ರೈಲರ್ ವಾಹನ ಬಸ್‌ಗೆ ಡಿಕ್ಕಿಯಾಗಿ ೧೧ ಜನರು ಸಾವನ್ನಪ್ಪಿದ್ದಾರೆ. ಇತರೆ ೧೨ ಮಂದಿ ಗಾಯಗೊಂಡಿದ್ದಾರೆ ಎಂದು ಎಸ್‌ಪಿ ಮೃದುಲ್ ಕಚಾವಾ ಮಾಹಿತಿ ನೀಡಿದ್ದಾರೆ.
ಪೊಲೀಸರು ಗಾಯಾಳುಗಳನ್ನು ಆರ್‌ಬಿಎಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ. ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಗುಜರಾತ್‌ನ ಭಾವನಗರದಿಂದ ಉತ್ತರ ಪ್ರದೇಶದ ಮಥುರಾಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಇಂದು ಮುಂಜಾನೆ ಗುಜರಾತ್‌ನ ಭಾವನಗರದ ಜನರು ಬಸ್‌ನಲ್ಲಿ ಪುಷ್ಕರ್‌ಗೆ ಭೇಟಿ ನೀಡಿದ ಬಳಿಕ ಉತ್ತರ ಪ್ರದೇಶದ ಮಥುರಾ ವೃಂದಾವನಕ್ಕೆ ತೆರಳುತ್ತಿದ್ದರು. ಹಂತಾರ ಬಳಿ ಬಸ್‌ನ ಟಯರ್ ಪಂಚರ್ ಆಗಿದ್ದು, ಅಲ್ಲೇ ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಲಿಸಲಾಗಿತ್ತು. ಕೆಲ ಪ್ರಯಾಣಿಕರು ಬಸ್ಸಿನಿಂದ ಹೊರಗಿಳಿದು ಹಿಂಭಾಗದಲ್ಲಿ ನಿಂತಿದ್ದರು, ಉಳಿದವರು ಬಸ್‌ನೊಳಗಿದ್ದರು. ಬೆಳಗಿನ ಜಾವ ೪ ಗಂಟೆ ಸುಮಾರಿಗೆ ಜೈಪುರ ಕಡೆಯಿಂದ ವೇಗವಾಗಿ ಬಂದ ಟ್ರೈಲರ್, ಬಸ್‌ನ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದು, ನಿಂತಿದ್ದ ಬಸ್ ಅನ್ನು ಸುಮಾರು ೩೦ ಮೀಟರ್‌ವರೆಗೆ ಎಳೆದೊಯ್ದಿದೆ ಎಂದರು.
ಗುಜರಾತ್‌ನ ಭಾವನಗರದ ಡೆಹೋರ್ ನಿವಾಸಿಗಳಾದ ಅಣ್ಣು, ನಂದ್ರಂ, ಲಲ್ಲು, ಭಾರತ್, ಲಾಲ್ ಭಾಯಿ, ಅಂಬವೆನ್, ಕಮ್ಮುವೆನ್, ರಾಮು ವೆನ್, ಮಧು ವೆನ್, ಅಂಜುವೆನ್ ಮತ್ತು ಮಧುವೆನ್ ಮೃತಪಟ್ಟಿದ್ದಾರೆ. ಇನ್ನುಳಿದ ೧೨ ಮಂದಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.