Sunday, April 20, 2025
Google search engine

Homeಸ್ಥಳೀಯಪ್ರತಾಪ್ ಸಿಂಹ ಗೆದ್ದರೆ ನಾನು ಊರು ಬಿಡುತ್ತೇನೆ : ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಪ್ರತಾಪ್ ಸಿಂಹ ಗೆದ್ದರೆ ನಾನು ಊರು ಬಿಡುತ್ತೇನೆ : ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

ಮೈಸೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ೩ ಲಕ್ಷ ಮತಗಳ ಅಂತರದಿಂದ ನೂರಕ್ಕೆ ನೂರರಷ್ಟು ಸೋಲುತ್ತಾರೆ. ಏನಾದರೂ ಪ್ರತಾಪ್ ಸಿಂಹ ಗೆದ್ದರೆ ನಾನು ಊರನ್ನೇ ಬಿಟ್ಟು ಬಿಡುತ್ತೇನೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರು ಪ್ರತಾಪ್ ಸಿಂಹ ಅವರಿಗೆ ನೇರ ಸವಾಲು ಹಾಕಿದ್ದಾರೆ.

ಇಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಸೋಲಿನ ಭೀತಿಯಲ್ಲಿದ್ದಾರೆ. ಇದೇ ಕಾರಣದಿಂದ ಕಂಡ ಕಂಡವರ ಕಾಲನ್ನು ಹಿಡಿಯುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ೩ ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಈ ಬಗ್ಗೆ ಸಮೀಕ್ಷೆಯ ವರದಿಗಳು ಸಹ ಹೇಳಿವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ನೂರಕ್ಕೆ ನೂರರಷ್ಟು ಸೋಲುತ್ತಾರೆ. ಪ್ರತಾಪ್ ಸಿಂಹ ಏನಾದರೂ ಗೆದ್ದರೆ ನಾನು ಊರನ್ನು ಬಿಟ್ಟು ಬಿಡುತ್ತೇನೆ ಎಂದು ಅವರಿಗೆ ನೇರ ಸವಾಲು ಹಾಕಿದರು.

ಕಾವೇರಿ ನೀರಿನ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅರ್ಥಮಾಡಿಕೊಳ್ಳಬೇಕು. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ಮುಂದಿಟ್ಟು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ಆ ವಿಷಯವನ್ನು ಬಂಡವಾಳ ಮಾಡಿಕೊಳ್ಳುವುದು ಸರಿಯಲ್ಲ. ನಾಲ್ಕು ಜಲಾಶಯಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಅದು ಕೇಂದ್ರದ ಜಲಶಕ್ತಿ ಸಚಿವಾಲಯದ ಅಡಿ ಬರುತ್ತದೆ. ನಾವು ನೀರು ಹರಿಸುವುದನ್ನು ನಿಲ್ಲಿಸಿದ್ದೇವೆ. ಇದರ ಬಗ್ಗೆ ಕೇಂದ್ರದವರು ಗಮನಹರಿಸಬೇಕು. ರೈತರಿಗೆ ಪರಿಹಾರ ಕೊಡಬೇಕು. ರೈತರ ಬಗ್ಗೆ ಕೇಂದ್ರಕ್ಕೆ ಕಾಳಜಿ ಇದ್ದರೆ ವಾಸ್ತವ ಮಾತನಾಡಲಿ.

ನಮ್ಮಲ್ಲಿ ೨೫ ಸಂಸದರಿದ್ದಾರೆ. ಅವರು ಈ ಬಗ್ಗೆ ಏನೂ ಮಾತನಾಡುತ್ತಿಲ್ಲ. ಅವರು ಇದರ ಬಗ್ಗೆ ಒಂದು ಚರ್ಚೆ ಸಹ ನಡೆಸಿಲ್ಲ. ಅವರು ಏನು ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿ. ೨೫ ಸಂಸದರು ಈ ಬಗ್ಗೆ ಕೇಂದ್ರದ ವಿರುದ್ಧ ಧ್ವನಿ ಎತ್ತುತ್ತಿಲ್ಲವೇಕೆ. ಸುಮಲತಾ ಅವರು ಮಂಡ್ಯ ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲವೇಕೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ – ಜೆಡಿಎಸ್ ಮೈತ್ರಿಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ್, ಎರಡು ಪಕ್ಷಗಳ ಮೈತ್ರಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬಿಜೆಪಿಯಿಂದ ಜೆಡಿಎಸ್ ಗಾಗಲಿ ಅದೇ ರೀತಿ ಜೆಡಿಎಸ್ ನಿಂದ ಬಿಜೆಪಿಗಾಗಲಿ ಯಾವುದೇ ಅನುಕೂಲವಾಗುವುದಿಲ್ಲ. ಎರಡು ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಹೆಚ್ಚು ಅನುಕೂಲವಾಗಲಿದೆ. ವಿಧಾನಸಭಾ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳು ಬೀಳಲಿವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ೨೨ ರಿಂದ ೨೫ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದರು.

ದಸರಾ ಹತ್ತಿರ ಬರುತ್ತಿದೆ. ಜನರ ದಿಕ್ಕು ತಪ್ಪಿಸಲು, ಜನರ ಭಾವನೆಗಳಿಗೆ ಧಕ್ಕೆ ತರಲು, ಮಹಿಷಾ ದಸರಾ ಆಚರಣೆ ಮಾಡಬೇಡಿ ಎಂದು ಹೇಳುವ ನಿಮಗೆ ನಾಚಿಕೆಯಾಗಬೇಕು ಎಂದು ಸಂಸದರ ಹೇಳಿಕೆಗೆ ತಿರುಗೇಟು ನೀಡಿದ ಲಕ್ಷ್ಮಣ್, ಇಷ್ಟೆಲ್ಲ ಮಾತನಾಡುವವರು ಚಾಮುಂಡೇಶ್ವರಿ ಬೆಟ್ಟದ ಪ್ರವೇಶ ದ್ವಾರದಲ್ಲಿ ಮಹಿಷಾ ಪ್ರತಿಮೆಯನ್ನು ಏಕೆ ನಿರ್ಮಾಣ ಮಾಡಿದ್ದಾರೆ ತಿಳಿಸಲಿ. ಜನರಿಗೆ ಆಚರಣೆ ಮಾಡಬೇಡಿ, ಅದನ್ನು ತಿನ್ನಬೇಡಿ, ಆ ಬಟ್ಟೆ ಹಾಕಬೇಡಿ, ಈ ತರಹ ಪೂಜೆ ಮಾಡಬೇಡಿ ಎಂದು ಜನರ ನಡುವೆ ಕಲಹ ತರಬೇಡಿ. ಸಂವಿಧಾನದ ಅಡಿ ಎಲ್ಲದಕ್ಕೂ ಅವಕಾಶ ಇದೆ. ನಿಮ್ಮ ತೆವಲಿಗೆ ಏನೇನೋ ಮಾಡದೇ ಸುಮ್ಮನೆ ಇರಿ. ನಿಮ್ಮ ಆಡಳಿತ ಇದ್ದಾಗ, ನೀವು ರೌಡಿಸಂ ಮಾಡುವಾಗ ಯಾರಾದರೂ ಕೇಳುತ್ತಿದ್ದರಾ. ಈಗ ಇರುವುದು ಕಾಂಗ್ರೆಸ್ ಸರ್ಕಾರ, ಜನರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ಇದೆ ಎಂದು ಸಂಸದರ ವಿರುದ್ಧ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular