Saturday, April 19, 2025
Google search engine

Homeರಾಜ್ಯಸುದ್ದಿಜಾಲಆತ್ಮಹತ್ಯೆ ಪ್ರಕರಣಗಳ ತಡೆಗೆ ಎಲ್ಲರ ಸಹಕಾರ ಅಗತ್ಯ : ನ್ಯಾಯಾಧೀಶ ಎಂ. ಶ್ರೀಧರ

ಆತ್ಮಹತ್ಯೆ ಪ್ರಕರಣಗಳ ತಡೆಗೆ ಎಲ್ಲರ ಸಹಕಾರ ಅಗತ್ಯ : ನ್ಯಾಯಾಧೀಶ ಎಂ. ಶ್ರೀಧರ

ಚಾಮರಾಜನಗರ: ಆತ್ಯಹತ್ಯೆ ಪ್ರಕರಣಗಳನ್ನು ತಡೆಯುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಶ್ರೀಧರ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆಯ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಆತ್ಮಹತ್ಯೆ ವಿರೋಧಿ ದಿನವನ್ನು ಪ್ರತಿ ವರ್ಷ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಆತ್ಮಹತ್ಯೆ ವಿರೋಧಿ ದಿನ ಆಚರಣೆ ಬಗ್ಗೆ ತಿಳಿದು ಕೊಳ್ಳುವುದು ಅವಶ್ಯಕವಾಗಿದೆ. ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬಂದಿದೆ. ಪುರುಷರಿಗಿಂತ ಮಹಿಳೆಯರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚು ಕಂಡುಬಂದಿದೆ ಎಂದರು.

ಜೀವನದಲ್ಲಿ ಯಾವುದೇ ಒತ್ತಡಗಳಿಗೆ ಒಳಗಾಗಬಾರದು. ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬಾರದು. ಸಂವಿಧಾನದಲ್ಲಿ ಪ್ರತಿ ಒಬ್ಬ ವ್ಯಕ್ತಿಯೂ ಸ್ವತಂತ್ರ, ಸಮಾನತೆ ಹಾಗೂ ಘನತೆ ಗೌರವದಿಂದ ಬದುಕಬೇಕು ಎಂದು ತಿಳಿಸಿದೆ. ಸರ್ವರೂ ಸಮಾನವಾಗಿ ಬಾಳಬೇಕು. ಹುಟ್ಟು ಆಕಸ್ಮಿಕವಾಗಿದೆ. ಅದೇ ರೀತಿ ಸಾವು ಅನಿವಾರ್ಯವಾಗಿದೆ. ಸಾವು ತಾನಾಗಿಯೇ ಬರಬೇಕೆ ಹೊರತು ನಮ್ಮ ಕೈಯಾರೆ ಮಾಡಿಕೊಳ್ಳಬಾರದು ಎಂದು ನ್ಯಾಯಾಧೀಶರು ತಿಳಿಸಿದರು.

ಆತ್ಮಹತ್ಯೆ ತಡೆಗೆ ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆ ಸಿಬ್ಬಂದಿ ರಾಯಾಭಾರಿಗಳ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಆತ್ಮಹತ್ಯೆಯಂತಹ ಘಟನೆಗಳು ಸಂಭವಿಸದಂತೆ ತಿಳಿವಳಿಕೆ ನೀಡುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಮಾತನಾಡಿ ಮನಸ್ಸಿನ ದೌರ್ಬಲ್ಯ ಹಾಗೂ ಹತೋಟಿ ಇಲ್ಲದ ಕಾರಣದಿಂದ ಆತ್ಮಹತ್ಯೆ ಹೆಚ್ಚಾಗುತ್ತದೆ. ಸಣ್ಣಪುಟ್ಟ ಕಾರಣಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಜೀವನದಲ್ಲಿ ಒತ್ತಡಗಳಿಂದ ಮುಕ್ತರಾಗಬೇಕು. ಆಗ ಮಾತ್ರ ಧೃಢವಾಗಿ ಬದುಕಲು ಸಾಧ್ಯ. ಬದುಕಿನಲ್ಲಿ ಭರವಸೆ ಕಳೆದುಕೊಂಡು ಆತ್ಮಹತ್ಯೆಗಳಿಗೆ ದಾರಿ ಮಾಡಿಕೊಡಬಾರದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮನೋರೋಗ ತಜ್ಞರಾದ ಡಾ. ಎನ್. ಗೋಕುಲ್ ಅವರು ಮಾತನಾಡಿ ಆತ್ಮಹತ್ಯೆಗೆ ಕಾರಣಗಳನ್ನು ಹುಡುಕಿ ಪರಿಹರಿಸುವ ನಿಟ್ಟಿನಲ್ಲಿ ತಿಳಿಹೇಳಬೇಕಿದೆ. ಆತ್ಮಹತ್ಯೆ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಿದೆ. ಕರ್ನಾಟಕವು 4ನೇ ಸ್ಥಾನದಲ್ಲಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಪಿ. ಚಂದ್ರಶೇಖರ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಚಾಮರಾಜನಗರ ವೈದ್ಯಕೀಯ ಕಾಲೇಜಿನ ಮನೋರೋಗತಜ್ಞರಾದ ಡಾ. ರಾಜೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಮನೋರೋಗ ತಜ್ಞರಾದ ಡಾ. ಕೆ.ವಿ. ಮೇರಿ ಅಂಜಲಾ, ನಗರ ವೈದ್ಯಾಧಿಕಾರಿ ಡಾ. ಉಮಾರಾಣಿ, ಮಕ್ಕಳ ಸಮಿತಿ ಅಧ್ಯಕ್ಷರಾದ ಸರಸ್ವತಿ, ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular