ಮಂಗಳೂರು (ದಕ್ಷಿಣ ಕನ್ನಡ): ಸ್ವಾತಂತ್ರ್ಯ ಹೋರಾಟಗಾರ ಬಿ.ವಿ. ಕಕ್ಕಿಲಾಯ ಪ್ರೇರಿತ ಉಪನ್ಯಾಸದ ಕಾರ್ಯಕ್ರಮಕ್ಕಾಗಿ ಕಳೆದ ಶನಿವಾರ ನಗರದಲ್ಲಿರೋ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ ಆಗಮಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸ ತಜ್ಞ ಡಾ. ಶಂಸುಲ್ ಇಸ್ಲಾಂ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಎಬಿವಿಪಿ ವಿದ್ಯಾರ್ಥಿಗಳು ಅವಮಾನ ಎಸಗಿದ್ದಾರೆಂದು ಆರೋಪಿಸಿ ಎನ್‌ಎಸ್‌ಯುಐನಿಂದ ಖಂಡನಾ ಸಭೆ ಹಾಗೂ 1857ರ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರಿಗೆ ಗೌರವಾರ್ಪಣೆ ನಡೆಯಿತು.
ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಗೇಟಿನ ಎದುರು ಕರ್ನಾಟಕದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿ ನಾಲ್ಕು ಘಟನೆಗಳು ಹಾಗೂ ಆ ಘಟನೆಗಳಲ್ಲಿ ಪ್ರಾಣತ್ಯಾಗ ಮಾಡಿದ 132 ಹುತಾತ್ಮರ ಹೆಸರುಗಳ ಫಲಕಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಈ ಸಂದರ್ಭ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯ ತನ್ನದೇ ಆದ ಕೊಡುಗೆಯ ಮೂಲಕ ಹೆಸರುವಾಸಿಯಾಗಿದೆ. ಆದರೆ ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ಬಿ.ವಿ. ಕಕ್ಕಿಲ್ಲಾಯ ಪೇರಿತ ಉಪನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ್ದ ದಿಲ್ಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ, ಇತಿಹಾಸ ತಜ್ಞ ಡಾ. ಶಂಸುಲ್ ಇಸ್ಲಾಂ ವಿರುದ್ಧ ಎಬಿವಿಪಿ ಪ್ರತಿಭಟಿಸಿತ್ತು. 1857ರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರ ಬಗ್ಗೆ ಸಂಶೋಧನೆ ಮಾಡಿ ಮಾಹಿತಿ ಸಂಗ್ರಹಿಸಿರುವ, ಆ ವೀರರ ಅರಿವು ಮೂಡಿಸಲು ಬಂದಿದ್ದ ಡಾ. ಶಂಸುಲ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿರುವ ಎಬಿವಿಪಿ ನಡೆಯನ್ನು ಎನ್‌ಎಸ್‌ಯಐ ಖಂಡಿಸುವುದಾಗಿ ಹೇಳಿದರು.