ಬೆಂಗಳೂರು: ಎರಡು ಬಾರಿ ಸಿಎಂ ಮಾಡಿದಾಗಲೇ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಪಕ್ಷ ಉಳಿಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಎರಡೂ ಕಡೆ ಅಸಮಾಧಾನ ಸ್ಫೋಟ ಆಗಿದೆ. ಎರಡೂ ಕಡೆ ಶಾಸಕರು ರಾಗ ತೆಗೆದಿದ್ದಾರೆ. ಇನ್ನೂ ಕೆಲಕಾಲ ನೋಡೋಣ. ಬಹಳ ಸ್ಪೀಡ್ ಆಗಿರೋದು ನಮ್ಮ ಬ್ರದರ್. ಬ್ರದರ್ ಮತ್ತು ಬೊಮ್ಮಾಯಿ ಇಬ್ಬರೇ ಮೈತ್ರಿಯಾಗಲಿ ಅಂತ ಮಾತಾಡ್ತಿರೋದು. ಯಡಿಯೂರಪ್ಪ ಮಾತ್ರ ನೋಡೋಣ ಏನಾಗಲಿದೆ ಅಂತಿದ್ದಾರೆ ಎಂದು ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಯೋಗೇಶ್ವರ್‌ಗೂ ಮೈತ್ರಿ ಈಗ ಅನಿವಾರ್ಯ. ಅವರು ನನ್ನ ಸ್ನೇಹಿತರು. ಅವರಿಗೆ ಒಳ್ಳೆಯದಾಗಲಿ ಎಂದು ಯೋಗೇಶ್ವರ್ ಕೂಡ ಮೈತ್ರಿಯಾಗಲಿ ಅನ್ನೋ ಹೇಳಿಕೆಗೆ ಸಚಿವರು ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಚಿತ್ರದಲ್ಲಿ ಬರ ಮೂಡಿಸಿರೋ ಬಿಜೆಪಿ ಟ್ವೀಟ್ ಕುರಿತು ಉತ್ತರಿಸಿದ ಚಲುವರಾಯಸ್ವಾಮಿ, ಬಿಜೆಪಿಯವರಿಗೆ ಭಯ ಬಂದಿದೆ. ಪಾರ್ಲಿಮೆಂಟ್ ಚುನಾವಣೆ ಎದುರಿಸಲು ಆಗ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಬಗ್ಗೆ ಮಾತಾಡ್ತಿದ್ದಾರೆ. ಬರಗಾಲ ಯಾರಾದ್ರೂ ಹೇಳಿ ಕೇಳಿ ಕರೆಯಲು ಸಾಧ್ಯವಾ?. ಸಂಸ್ಕಾರವಿಲ್ಲದೇ ಮಾತನಾಡ್ತಿದ್ದಾರೆ. ಮೋದಿ ಅವರು ರಾಜ್ಯಕ್ಕೆ ಬಂದಾಗ ವಿಶ್ ಮಾಡದೇ ಹೋಗಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಮಾತಾಡಿದ್ರೆ ನಮ್ಮನ್ನು ದೆಹಲಿಗೆ ಕರೀತಾರೆ ಅಂತ ತಿಳಿದುಕೊಂಡಿದ್ದಾರೆ. ನಾಲ್ಕು ತಿಂಗಳಾದ್ರೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಜೆಡಿಎಸ್ ಜೊತೆ ಹೋಗ್ತಿದ್ದಾರೆ ಎಂದು ಕಿಡಿ ಕಾರಿದರು.
ಬರ ಪರಿಹಾರ ನೀಡುವಂತೆ ವಿರೋಧ ಪಕ್ಷಗಳ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಬರ ಪರಿಹಾರ ಸುಮ್ಮನೆ ಮಾಡಲು ಆಗಲ್ಲ. ಅದಕ್ಕಾಗಿ ಸರ್ವೆ ಮಾಡಬೇಕು. ಸರ್ವೆ ಮಾಡಿ ಎಷ್ಟು ಅಂತ ಅಂದಾಜು ಮಾಡಬೇಕು. ಬಳಿಕ ಪರಿಹಾರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಎರಡರಿಂದಲೂ ಪರಿಹಾರ ಆಗಬೇಕು. ಬಿಜೆಪಿಯವರು ಕೇಂದ್ರದ ಬಳಿ ಪರಿಹಾರ ಕೇಳಲಿ. ೨೫ ಜನ ಎಂಪಿ ಇದ್ದಾರೆ. ಒಬ್ಬರೂ ಬರದ ಬಗ್ಗೆ ಮಾತನಾಡುತ್ತಿಲ್ಲ. ಮೋದಿ ಬಳಿಯಾದ್ರೂ ಹೋಗಿ ಮಾತನಾಡಲಿ. ರಾಜ್ಯಕ್ಕೆ ಪರಿಹಾರ ಕೊಡಿಸಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.