ಚಿತ್ರದುರ್ಗ : ಕ್ರೀಡೆ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.
ನಗರದ ವೀರ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಚಿತ್ರದುರ್ಗ ತಾಲೂಕು ಮಟ್ಟದ 14 ಮತ್ತು 17 ವರ್ಷದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ನಿಮ್ಮ ಕೈಲಾದಷ್ಟು ಸಾಧನೆ ಮಾಡಿ ಮುಂದೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕ್ರೀಡೆ ಸಹಕಾರಿಯಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಇ.ಸಂಪತ್ ಕುಮಾರ್ ಮಾತನಾಡಿ, ಶಾಲೆಯಲ್ಲಿ ಉತ್ತಮ ತರಬೇತಿ ನೀಡಿದರೆ ಅಂತಹ ಮಕ್ಕಳು ಉತ್ತಮ ಕ್ರೀಡೆಯಲ್ಲಿ ಹೊರಬರಲು ಸಾಧ್ಯವಾಗುತ್ತದೆ. ಗ್ರಾಮಾಂತರವು ಅತ್ಯುತ್ತಮ ಕ್ರೀಡಾಪಟುಗಳನ್ನು ಹೊಂದಿದೆ. ದೈಹಿಕ ಶಿಕ್ಷಣ ಶಿಕ್ಷಕರು ಅವರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ದೈಹಿಕ ಶಿಕ್ಷಣ ಶಿಕ್ಷಕರಿಗಿದೆ ಎಂದರು. ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ ಮಾತನಾಡಿ, ನಾವು ಓದುತ್ತಿರುವಾಗ ಕ್ರೀಡೆಯಲ್ಲಿ ಭಾಗವಹಿಸಲು ಯಾವುದೇ ಸೌಲಭ್ಯವಿರಲಿಲ್ಲ. ಪ್ರಸ್ತುತ ಎಲ್ಲ ರೀತಿಯ ಸೌಲಭ್ಯಗಳಿವೆ. ಕ್ರೀಡಾಪಟುಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಕರು ಇರುವುದರಿಂದ ವಿದ್ಯಾರ್ಥಿಗಳು ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶಿಕ್ಷಣಾಧಿಕಾರಿಗಳ ಸಂಘ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘ ಜಿಲ್ಲಾ ಹಾಗೂ ತಾಲೂಕು ಸಂಘಗಳು ಸೇರಿದಂತೆ ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಇದ್ದರು.