ಹುಬ್ಬಳ್ಳಿ : ಬರಗಾಲದ ವಿಚಾರದಲ್ಲಿ ನಮಗೆ ಯಾವ ಗೊಂದಲವೂ ಇಲ್ಲ. ರೈತರನ್ನು ಗೊಂದಲಕ್ಕೀಡು ಮಾಡಿದ್ದು ಕೇಂದ್ರ ಸರ್ಕಾರ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ನಿನ್ನೆ ಬರಗಾಲ ಘೋಷಣೆ ಮಾಡಿದ್ದೇವೆ. ೧೯೫ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದೇವೆ. ಈ ಸಂಬಂಧ ಒಂದೂವರೆ ತಿಂಗಳಿಂದ ಕೆಲಸ ಮಾಡಿ ಬರಗಾಲ ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಮಾನದಂಡಗಳಿಗೆ ಕೆಲ ತಾಲೂಕುಗಳು ಬರುತ್ತಿಲ್ಲ ಎಂದು ತಿಳಿಸಿದರು.
ನಮಗೆ ಸರಿ ಮಾಡೋಕೆ ಯಾವ ಪ್ರತಿಷ್ಠೆಯೂ ಇಲ್ಲ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ನಾವು ಮಾಡಿದ್ದೇವೆ. ಇದೇ ಅಂತಿಮ ಅಲ್ಲ, ತಿಂಗಳ ಕೊನೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದು ಹೇಳಿದರು. ಜುಲೈ ಮೊದಲನೇ ವಾರದಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬರಗಾಲ ಘೋಷಣೆ ಮಾಡೋದು ಕಷ್ಟ. ಅಂತಹ ಸವಾಲಿನ ಮಧ್ಯೆಯೂ ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆ ಮಾಡಬೇಕು. ಕೇಂದ್ರ ತನ್ನ ಪ್ರತಿಷ್ಠೆಯನ್ನು ಬಿಡಬೇಕು ಎಂದ ಸಚಿವ ಬೈರೇಗೌಡ ಆಗ್ರಹಿಸಿದರು.
ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದೇನೆ. ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇನೆ. ಕಂದಾಯ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಆಗಬೇಕು. ಸರಿಯಾಗಿ ಕೆಲಸ ನಡೆದರೆ ಜನ ನೆಮ್ಮದಿಯಿಂದ ಇರುತ್ತಾರೆ. ಹೊಸ ಸರ್ಕಾರ ಬಂದಿದೆ. ಜನಪರ ಆಡಳಿತ ಇರಬೇಕು. ಹಳೇ ಸರ್ಕಾರ ಹೋಗಿ ಹೊಸ ಸರ್ಕಾರ ಬಂದಿದೆ. ಹಳೇ ಸರ್ಕಾರದ ತರಹ ನಾವು ಇರಬಾರದು. ಹೀಗಾಗಿ ಆಡಳಿತದಲ್ಲಿ ಬದಲಾವಣೆ ತರಲು ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.