ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಹಾಗು ಹಾರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಹೆಚ್ಚುತ್ತಿರುವುದನ್ನು ತಡೆಯಲು ಅಧಿಕಾರಿಗಳು ಮುಂದಾಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅಕ್ರಮ ಗಣಿಗಾರಿಕೆ ಹೋರಾಟ ಸಮಿತಿ ಹಾಗೂ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಸಮಿತಿಯ ಮುಖಂಡರಾದ ಸೀಗುಾರು ವಿಜಯ್ ಕುಮಾರ್ ಅವರು ಮಾತನಾಡಿ ಬೆಟ್ಟದಪುರ ಸಮೀಪದ ಇತಿಹಾಸ ಪ್ರಸಿದ್ಧ ಸೀತಾ ಬೆಟ್ಟ ಸೇರಿದಂತೆ ಹಲವು ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ತಹಶೀಲ್ದಾರ್ ಕುಂ ಇ ಅಹಮದ್ ಅವರಿಗೆ ಮನವಿ ನೀಡಿದ ಹಿನ್ನೆಲೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದು ಶ್ಲಾಘನೀಯ ಆದರೆ ಅವರು ವಾಸ್ತವ ವರದಿಯನ್ನು ಮೇಲಧಿಕಾರಿಗಳಿಗೆ ನೀಡುವ ಮೂಲಕ ಅಕ್ರಮ ಗಣಿ ಮಾಫಿಯಾ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕು, ಗಣಿಗಾರಿಕೆ ನಡೆಸಲು ಇಲಾಖೆಯಿಂದ ಅನುಮತಿ ಪಡೆದ ಸ್ಥಳ ಹೊರತುಪಡಿಸಿ ಹೆಚ್ಚುವರಿಯಾಗಿ ಅಕ್ಕಪಕ್ಕದ ಸ್ಥಳಗಳನ್ನು ಆಕ್ರಮಿಸಿಕೊಂಡು ಗಣಿಗಾರಿಕೆ ನಡೆಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳ ಮನೆಗಳು ಬಿರುಕು ಬಿಡುತ್ತಿದ್ದು ಪ್ರಾಚೀನ ಇತಿಹಾಸವುಳ್ಳ ದೇವಾಲಯಗಳು ಶಿಥಿಲಗೊಳ್ಳುತ್ತಿವೆ ಕೂಡಲೇ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದರು.
ಮುಖಂಡರಾದ ಟಿ.ಈರಯ್ಯ ಅವರು ಮಾತನಾಡಿ ಗಣಿಗಾರಿಕೆಗೆ ಅನುಮತಿ ಪಡೆದ ಸ್ಥಳದ ಅಕ್ಕಪಕ್ಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಸ್ಮಶಾನ ಮತ್ತು ಸರ್ಕಾರಿ ಆಸ್ತಿಯನ್ನು ಆಕ್ರಮಿಸಿಕೊಂಡು ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಕಾನೂನು ರೀತಿ ಅಟ್ರಾಸಿಟಿ ಕೇಸ್ ದಾಖಲಿಸಲು ಕ್ರಮ ವಹಿಸಬೇಕು, ಸೀತಾ ಬೆಟ್ಟದಲ್ಲಿ ಅನೇಕ ಐತಿಹಾಸಿಕ ಕುರುಹು ಕಂಡುಬಂದಿವೆ ಇದನ್ನು ಸಂರಕ್ಷಿಸಲು ತಾಲೂಕಿನಲ್ಲಿ ಪ್ರಾಚೀನ ಪುರಾತತ್ವ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಈ ಎರಡು ಇಲಾಖೆ ಅಧಿಕಾರಿಗಳ ನಿರ್ಲಕ್ಷತನದಿಂದ ಅಕ್ರಮ ಗಣಿಗಾರಿಕೆ ಹೆಚ್ಚುತ್ತಿದ್ದು ಇವರ ವಿರುದ್ಧ ಸಚಿವರಾದ ಕೆ.ವೆಂಕಟೇಶ್ ಅವರಿಗೆ ದೂರು ನೀಡುವುದಾಗಿ ತಿಳಿಸಿದರು.
ಮುಖಂಡರಾದ ಪತ್ರಕರ್ತ ಎಚ್.ಡಿ ರಮೇಶ್ ಅವರು ಮಾತನಾಡಿ ಬೆಟ್ಟದಪುರ ಗ್ರಾಮಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು ಅಕ್ರಮ ಗಣಿಗಾರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಇತಿಹಾಸ ಪ್ರಸಿದ್ಧ ಬೆಟ್ಟ ಗುಡ್ಡ ದೇವಾಲಯಗಳು ನಾಶವಾಗುವ ಸಂಭವ ಇರುವುದರಿಂದ ಕೂಡಲೇ ಅಕ್ರಮ ಗಣಿಗಾರಿಕೆಗೆ ವಿರುದ್ಧ ಸುತ್ತ ಮುತ್ತಲ ಗ್ರಾಮಸ್ಥರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ಸಮಿತಿಯ ಮುಖಂಡರಾದ ಬೆಟ್ಟದಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಎಸ್ ಸುರೇಶ್, ನಾರಾಯಣ್ ,ಪಿ.ಪಿ ಪುಟ್ಟಯ್ಯ, ಭುಾತನಹಳ್ಳಿ ಶಿವಣ್ಣ, ಗೋವಿಂದ ನಾಯ್ಕ, ಆರ್.ಡಿ ಚಂದ್ರು, ಕುಮಾರನಾಯಕ , ಜವರನಾಯಕ, ನಿಶಾಂತ್, ಈರೇಗೌಡ, ಕಾಳನಾಯಕ, ಮಂಜುನಾಥ್, ರಾಜೇಗೌಡ ಸೇರಿದಂತೆ ಸಮಿತಿಯ ಮುಖಂಡರು ಇದ್ದರು.