ಬೆಂಗಳೂರು: ಪದ್ಮನಾಭ ನಗರ ಕ್ಷೇತ್ರದ ಹಲವು ಬಿಜೆಪಿ ಹಾಗೂ ಜೆಡಿಎಸ್ ಮಾಜಿ ಕಾರ್ಪೊರೇಟರ್‌ಗಳು, ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಲೋಕಸಭೆ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಆಪರೇಷನ್ ಮುಂದುವರೆಸಿದ್ದು, ಮಾಜಿ ಸಚಿವ ಹಾಗೂ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್. ಅಶೋಕ್ ಆಪ್ತರಿಗೆ ಡಿಕೆ ಬ್ರದರ್ಸ್ ಗಾಳ ಹಾಕುವಲ್ಲಿ ಯಶಸ್ವಿ ಆಗಿದ್ದಾರೆ.
ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಮುಖಂಡರಾದ ಮಾಜಿ ಉಪಮೇಯರ್ ಎಲ್ ಶ್ರೀನಿವಾಸ್, ಪಾಲಿಕೆ ಮಾಜಿ ಸದಸ್ಯರಾದ ಶೋಭಾ ಅಂಜಿನಪ್ಪ, ಎಚ್ ನಾರಾಯಣ್, ಎಚ್ ಸುರೇಶ್, ವೆಂಕಟಸ್ವಾಮಿ ನಾಯ್ಡು, ಎಲ್ ಗೋವಿಂದರಾಜು, ಬಾಲಕೃಷ್ಣ, ಸುಗುಣ ಬಾಲಕೃಷ್ಣ, ನರಸಿಂಹ ನಾಯಕ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಂಜಿನಪ್ಪ, ಜೆಡಿಎಸ್ ಮುಖಂಡ ಪ್ರಸಾದ್ ಬಾಬು (ಕಬಡ್ಡಿ ಬಾಬು) ಚಿತ್ರ ನಟ ರವಿಕಿರಣ್, ಅಕ್ಬರ್ ಅಲಿಖಾನ್ ಮತ್ತಿತರ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ೨೦೨೮ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಪೀಠಿಕೆ ಇದಾಗಿದೆ. ಪದ್ಮನಾಭ ನಗರದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ತತ್ವ ಸಿದ್ಧಾಂತ ನಂಬಿಕೆ ಇಟ್ಟವರಿಗೆ ಸ್ವಾಗತವನ್ನು ಕಾಂಗ್ರೆಸ್ ಬಯಸುತ್ತದೆ. ಹಳಬರು, ಹೊಸಬರು ಬೇಧವಿಲ್ಲದೆ ಪಕ್ಷ ಸಂಘಟನೆ ಮಾಡಬೇಕು. ಬಿಜೆಪಿ ಮುಖಂಡರ ಪಕ್ಷ ಸೇರ್ಪಡೆ ಕಾಂಗ್ರೆಸ್?ಗೆ ಬೆಂಗಳೂರು ದಕ್ಷಿಣದಲ್ಲಿ ಶಕ್ತಿ ಸಿಕ್ಕಂತಾಗಿದೆ ಎಂದರು.