Monday, April 21, 2025
Google search engine

Homeರಾಜ್ಯಸುದ್ದಿಜಾಲಹೆಚ್.ಐ.ವಿ ಸೋಂಕಿತರಿಗೆ ಸಮರ್ಪಕವಾಗಿ ಇಲಾಖೆಗಳ ಸವಲತ್ತು ತಲುಪಿಸಿ : ಜಿಲ್ಲಾಧಿಕಾರಿ ಸೂಚನೆ

ಹೆಚ್.ಐ.ವಿ ಸೋಂಕಿತರಿಗೆ ಸಮರ್ಪಕವಾಗಿ ಇಲಾಖೆಗಳ ಸವಲತ್ತು ತಲುಪಿಸಿ : ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ: ಹೆಚ್.ಐ.ವಿ ಸೋಂಕಿತರಿಗೆ ಹಾಗೂ ಅವರ ಕುಟುಂಬದವರಿಗೆ ವಿವಿಧ ಇಲಾಖೆಗಳಿಂದ ನೀಡಬೇಕಿರುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿಂದು ಹೆಚ್.ಐ.ವಿ ಸೋಂಕಿತರಿಗೆ ಸಾಮಾಜಿಕ ಸವಲತ್ತುಗಳನ್ನು ಒದಗಿಸುವ ಕುರಿತು ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಚ್.ಐ.ವಿ ಏಡ್ಸ್ ಸೋಂಕಿತರಿಗೆ ವಿವಿಧ ಇಲಾಖೆಗಳು ಅನುಕೂಲ ಕಲ್ಪಿಸಬೇಕಿದೆ. ಸೋಂಕಿತರಿಗೆ ಹಾಗೂ ಅವರ ಕುಟುಂಬದವರಿಗೆ ನೆರವಾಗಲು ಅವಕಾಶವಿರುವ ಎಲ್ಲ ಸವಲತ್ತುಗಳನ್ನು ಮುತುವರ್ಜಿಯಿಂದ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಸೋಂಕಿತರ ಬದುಕು ಆರ್ಥಿಕವಾಗಿ ಸಬಲಗೊಳ್ಳಲು ಅನೇಕ ಇಲಾಖೆಗಳಿಂದ ಸೌಲಭ್ಯ ಒದಗಿಸಲು ಅವಕಾಶವಿದೆ. ಇಲಾಖಾ ಮುಖ್ಯಸ್ಥರು ಸೋಂಕಿತರ ಮಾಹಿತಿ ಪಡೆದು ಆಯಾ ಇಲಾಖೆಯ ಪ್ರಯೋಜನ ತಲುಪಿಸಬೇಕು. ಸೋಂಕಿತರು ಆಸಕ್ತಿ ಹೊಂದಿರುವ ವಿಷಯಗಳಲ್ಲಿ ತರಬೇತಿ ನೀಡಿ ಅವರ ಉದ್ಯೋಗಕ್ಕೆ ಹಾಗೂ ಆದಾಯಕ್ಕೆ ಅನುಕೂಲ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಏಡ್ಸ್ ನಿಯಂತ್ರಣ ತಡೆಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಏಡ್ಸ್ ಹರಡದಂತೆ ತಡೆಗಟ್ಟಲು ಅರಿವು ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು. ಸೂಕ್ತ ಮಾರ್ಗದರ್ಶನದ ಮೂಲಕ ಏಡ್ಸ್ ಪ್ರಕರಣಗಳ ಸಂಖ್ಯೆಯನ್ನು ಜಿಲ್ಲೆಯಲ್ಲಿ ತಗ್ಗಿಸಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಸೂಚಿಸಿದರು.

ಇದೇ ವೇಳೆ ಜಿಲ್ಲಾ ರಕ್ತ ಸುರಕ್ಷಾ ಸನ್ನದ್ದತೆ ಟಾಸ್ಕ್ ಪೋರ್ಸ್ ಸಭೆ ನಡೆಸಿದ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ರಕ್ತ ಸಂಗ್ರಹಣೆಗೆ ಹೆಚ್ಚು ಒತ್ತು ನೀಡಬೇಕಿದೆ. ಜಿಲ್ಲೆಗೆ ಅಗತ್ಯ ಬೀಳುತ್ತಿರುವ ಪ್ರಮಾಣದಲ್ಲಿ ರಕ್ತ ಸಂಗ್ರಹ ದಾಸ್ತಾನು ಇಟ್ಟುಕೊಳ್ಳಬೇಕಿದೆ. ರಕ್ತದಾನದ ಮಹತ್ವ ಕುರಿತು ಜಾಗೃತಿ ಉತ್ತೇಜನದ ಮೂಲಕ ರಕ್ತದಾನ ಶಿಬಿರಗಳನ್ನು ಹೆಚ್ಚು ಆಯೋಜಿಸಬೇಕು. ವಿವಿಧ ಸ್ವಯಂ ಸೇವಾ ಸಂಸ್ಥೆಗಳ, ಇಲಾಖೆಗಳ ಸಹಕಾರ ಪಡೆಯಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೃಷ್ಣಪ್ರಸಾದ್, ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ಜಿಲ್ಲಾ ಏಡ್ಸ್ ನಿಯಂತ್ರಾಣಧಿಕಾರಿ ಡಾ. ರವಿಕುಮಾರ್, ಇತರೆ ವೈದ್ಯಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆ, ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular