ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲೊಂದು ಅಪರೂಪದ ಘಟನೆ ನಡೆದಿದ್ದು, ಮಗು ಉಳಿಸಿಕೊಳ್ಳಲು 6 ತಿಂಗಳು ಆಸ್ಪತ್ರೆಯಲ್ಲೇ ಉಳಿದು ಹೆಣ್ಣು ಮಗುವಿಗೆ ತಾಯಿ ಜನ್ಮ ನೀಡಿದ್ದಾಳೆ.
ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿಯ ಜಯಲಕ್ಷ್ಮಿ ಚಿಕಿತ್ಸೆ ಪಡೆದು ಮಗುವಿಗೆ ಜನ್ಮ ನೀಡಿದ ತಾಯಿ.
ಮಂಡ್ಯ ಮಿಮ್ಸ್ ಆಸ್ಪತ್ರೆಯ ವೈದ್ಯರು ಬಡ ಗರ್ಭಿಣಿ ಮಹಿಳೆಗೆ ಉಚಿತ ಚಿಕಿತ್ಸೆ ನೀಡಿ ಮಾನೀಯತೆ ಮೆರೆದಿದ್ದಾರೆ.
ನಾಲ್ಕು ಬಾರಿ ಗರ್ಭಪಾತವಾದ ಹಿನ್ನೆಲೆ ಮತ್ತೆ ಅನಾಹುತ ಆಗಬಾರದೆಂಬ ನಿಟ್ಟಿನಲ್ಲಿ ಬರೋಬ್ಬರಿ 6 ತಿಂಗಳು ಆಸ್ಪತ್ರೆಯಲ್ಲೇ ಇದ್ದು ಗರ್ಭಿಣಿ ಮಹಿಳೆ ಚಿಕಿತ್ಸೆ ಪಡೆದಿದ್ದಾರೆ. ಸೆ.6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಕ್ಕಳಿಲ್ಲದೆ ನೊಂದಿದ್ದ ಕುಟುಂಬಕ್ಕೆ ಮಿಮ್ಸ್ ವೈದ್ಯರು ಹೊಸ ಬೆಳೆಕು ತಂದಿದ್ದಾರೆ.

ಕಳೆದ ಏಳು ವರ್ಷದ ಹಿಂದೆ ಮಾದೇಶ್ ಎಂಬುವರನ್ನು ಜಯಲಕ್ಷ್ಮಿ ಮದುವೆಯಾಗಿದ್ದು, ನಾಲ್ಕು ಬಾರಿ ಗರ್ಭಿಣಿಯಾದರು ಮೂರು ತಿಂಗಳಲ್ಲಿ ಗರ್ಭಪಾತವಾಗ್ತಿತ್ತು. ಮತ್ತೊಮ್ಮೆ ಐದನೇ ಬಾರಿಗೆ ಗರ್ಭಿಣಿಯಾಗಿದ್ದ ಜಯಲಕ್ಷ್ಮಿ ಮುನ್ನೆಚ್ಚರಿಕೆಗೆ ಸ್ತ್ರೀ ರೋಗ ತಜ್ಞ ಡಾ.ಮನೋಹರ್ ಭೇಟಿ ಮಾಡಿದ್ದರು. ಗರ್ಭಿಣಿ ಮಹಿಳೆಯನ್ನ ತಪಾಸಣೆ ಮಾಡಿದ್ದ ವೈದ್ಯ ಡಾ.ಮನೋಹರ್, ನೊಂದ ಕುಟುಂಬಕ್ಕೆ ಆಸರೆಯಾಗಿ
ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿಕೊಂಡು ಉಚಿತ ಚಿಕಿತ್ಸೆ ನೀಡಿದ್ದಾರೆ. ಆದರೆ ಜಯಲಕ್ಷ್ಮಿ ಅವರಿಗೆ 7 ತಿಂಗಳು ತುಂಬಿದ ಸಂದರ್ಭದಲ್ಲಿ ಕರುಳಿನ ಮೇಲೆ ಕರುಳು ಇದ್ದ ಕಾರಣ ಶಸ್ತ್ರಚಿಕಿತ್ಸೆ ಮಾಡಿ ತಾಯಿ-ಮಗು ಇಬ್ಬರ ಜೀವವನ್ನು ವೈದ್ಯರು ಉಳಿಸಿದ್ದಾರೆ.
ಸದ್ಯ ಆಸ್ಪತ್ರೆಯಲ್ಲೆ ತಾಯಿ- ಮಗು ಆರೋಗ್ಯವಾಗಿದ್ದಾರೆ. ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ.
ಮಿಮ್ಸ್ ವೈದ್ಯರು-ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.
ಈ ವೇಳೆ ಮಾತನಾಡಿರುವ ಜಯಲಕ್ಷ್ಮಿ, ನಮ್ಮ ಮಗುವನ್ನು ಉಳಿಸಿಕೊಟ್ಟ ವೈದ್ಯರು ನನ್ನ ದೇವರು. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಟ್ಟು ಮನೆಯ ಮಗಳಂತೆ ನೋಡಿಕೊಂಡಿದ್ದಾರೆ. ನಮ್ಮ ಕುಟುಂಬದ ಪಾಲಿಗೆ ಡಾ.ಮನೋಹರ್ ದೇವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ, ಸರ್ಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಮ್ಮಿ ಇಲ್ಲ. ಉತ್ತಮ ವೈದ್ಯರು, ಚಿಕಿತ್ಸೆ ಸಿಗುತ್ತೆ ಜನರು ಸದುಪಯೋಗ ಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.