ಮೈಸೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ಈಗಿನ ಸರ್ಕಾರಕ್ಕೆ ರಾಜ್ಯದ ರೈತರ ಹಿತಕ್ಕಿಂತ ತಮಿಳುನಾಡು ಸರ್ಕಾರದ ಜೊತೆಗೆ ರಾಜಕೀಯ ಮೈತ್ರಿಯೇ ಮುಖ್ಯವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿದ ನಂತರದ ಕಾವೇರಿ ನದಿ ನೀರಿನ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಮಿಳುನಾಡಿಗೆ ನೀರು ಬಿಡಬೇಡಿ, ವಾಸ್ತವ ಸ್ಥಿತಿಯನ್ನು ಕೋರ್ಟ್ ನ ಮುಂದಿಡಿ ಎಂದು ಸರ್ಕಾರಕ್ಕೆ ನಾನು ಹೇಳಿದ್ದೆನು. ಮೊನ್ನೆಯ ಸಭೆಯಲ್ಲೂ ಅದನ್ನೇ ಹೇಳಿದ್ದೆನು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಸ್ಟಾಲಿನ್ ಜೊತೆ ಒಳ್ಳೆಯ ನಂಟಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯದ ರೈತರ ಹಿತಾಸಕ್ತಿ ಬೇಕಾಗಿಲ್ಲ. ತಮಿಳುನಾಡಿನ ಸ್ಟಾಲಿನ್ ಅವರ ಡಿಎಂಕೆ ಸರ್ಕಾರದ ಜೊತೆಗೆ ರಾಜಕೀಯ ಮೈತ್ರಿಯೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ಈಗಲೂ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಸಂಸದರು, ಈಗಲೂ ಡ್ಯಾಂಗೆ ಹೋಗಿ ಹೊರ ಹರಿವು ಪರೀಕ್ಷೆ ಮಾಡಲಿ, ಈ ವಿಚಾರವಾಗಿ ನಾನು ಚಾಲೆಂಜ್ ಮಾಡುತ್ತೇನೆ. ಪ್ರತಿನಿತ್ಯ ೫ ಸಾವಿರ ಕ್ಯೂಸೆಕ್ ನೀರನ್ನು ಸೆ. ೧೩ ರಿಂದ ಹರಿಸಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಈ ವಿಚಾರದ ಬಗ್ಗೆ ಡಿಸೈಡ್ ಮಾಡಬೇಕು. ಪ್ರಧಾನಿ ಬದಲು ಸ್ಟಾಲಿನ್‌ಗೆ ಕರೆ ಮಾಡಿ ನೀರು ಬಿಡಲು ಆಗುವುದಿಲ್ಲ ಎಂದು ಹೇಳಲಿ. ಇವರಿಗೆ ಲೋಕಸಭಾ ಚುನಾವಣೆ ಮುಖ್ಯವೇ ಅಥವಾ ರಾಜ್ಯದ ರೈತರ ಹಿತಾಸಕ್ತಿ ಮುಖ್ಯವೇ ಎಂದು ಪ್ರತಾಪ್ ಸಿಂಹ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ದಸರಾ ಸಂಪ್ರದಾಯ ಮುರಿಯುವುದು ಬೇಡ: ಅದ್ಧೂರಿ, ಸರಳ ದಸರಾ ಆಚರಣೆ ಚರ್ಚೆಯ ವಿಚಾರದಲ್ಲಿ ನಾನಿಲ್ಲ. ಸಾಂಪ್ರದಾಯಿಕವಾಗಿ ದಸರಾ ಮಾಡಲಿ. ದಸರಾ ಮಾಡುವಾಗ ಒಂದಷ್ಟು ಹಣ ಖರ್ಚಾಗುತ್ತದೆ. ಅಂದ ಮಾತ್ರಕ್ಕೆ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಮುರಿಯುವುದು ಬೇಡ. ದಸರಾ ಎಂದರೆ ಜಂಬೂಸವಾರಿ, ದೀಪಾಲಂಕಾರ, ಕ್ರೀಡೆ ಮತ್ತು ಗೋಷ್ಠಿಗಳು ಇರುತ್ತವೆ. ಇದಕ್ಕೆಲ್ಲ ಖರ್ಚು ಆಗೇ ಆಗುತ್ತದೆ. ಬರ ಇದೆ ಎನ್ನುತ್ತ ಸಂಪ್ರದಾಯ ಮುರಿಯುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.