ಕಲಬುರಗಿ: ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಅಂಗವಾಗಿ ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಹೈದ್ರಾಬಾದ್ ಕರ್ನಾಟಕ ವಿಮೋಚನಾ ರೂವಾರಿ ಸರ್ಧಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಯೋಜನೆಗಳ ಬಗ್ಗೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಕುರಿತು ವಿವರಿಸಿದರು. ಅಲ್ಲದೆ ನೂತನ ಸಾರಿಗೆ ಬಸ್, ಹೆಲ್ತ್ ಎಟಿಎಂ ಲೋಕಾರ್ಪಣೆ ಸೇರಿದಂತೆ ನಾನಾ ಕಾರ್ಯಕ್ರಮಗಳಿಗೆ ಹಸಿರು ನಿಶಾನೆ ತೋರಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳುವ ಮೂಲಕ ಸಂಭ್ರಮ ಇಮ್ಮಡಿಗೊಳಿಸಿದ್ದಾರೆ. ಹೈದ್ರಾಬಾದ್‌ನಿಂದ ಬೆಳಗ್ಗೆ ೮-೩೦ ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯ, ನೇರವಾಗಿ ಪಟೇಲ್ ವೃತ್ತಕ್ಕೆ ಆಗಮಿಸಿ, ಸರ್ಧಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಬೃಹತ್ ಗಾತ್ರದ ಹೂಮಾಲೆ ಅರ್ಪಣೆ ಮಾಡಿದರು.
ಬಳಿಕ ನೇರವಾಗಿ ಪೊಲೀಸ್ ಪರೇಡ್ ಮೈದಾನಕ್ಕೆ ತೆರಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು. ಪೊಲೀಸ್, ಎನ್.ಸಿ.ಸಿ ಸೇರಿದಂತೆ ನಾನಾ ತುಕಡಿಗಳಿಂದ ನಡೆದ ಪರೇಡ್ ಗೌರವ ಪಡೆದರು. ಇದೇ ವೇಳೆ ಸ್ವತಂತ್ರ ಸೇನಾನಿಗಳಿಗೆ ಸಾಧಕರಿಗೆ ಅಭಿನಂದಿಸಿ ಗೌರವಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ, ಹಸಿವು ಮುಕ್ತ ಕರ್ನಾಟಕ್ಕಾಗಿ ಅನ್ನ ಭಾಗ್ಯ ಉಚಿತ ಬೆಳಕು, ಸುಸ್ಥಿರ ಬದುಕು ಘೋಷವಾಕ್ಯದ ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿಯೋಜನೆ, ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ ೨,೦೦೦ ರೂ. ಒದಗಿಸುವ ಗೃಹ ಲಕ್ಷ್ಮಿಯೋಜನೆ ಜಾರಿಗೆ ತರಲಾಗಿದೆ. ೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಮಾಸಿಕ ೧,೫೦೦ ಮತ್ತು ಪದವಿ ತೇರ್ಗಡೆಯಾದ ನಿರುದ್ಯೋಗಿಗಳಿಗೆ ಮಾಸಿಕ ೩,೦೦೦ ಭತ್ಯೆ ನೀಡುವ ಯುವ ನಿಧಿ ಯೋಜನೆ ಈ ವರ್ಷದ ಅಂತ್ಯದೊಳಗೆ ಜಾರಿಗೆತರಲಾಗುತ್ತದೆ ಎಂದು ಹೇಳಿದರು.
ಈ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡಲು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿ “ಅಕ್ಷರ ಆವಿಷ್ಕಾರ” ಯೋಜನೆ ರೂಪಿಸಿದೆ. ಇದರಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರದಿಂದ ೧೬,೦೪೧ ಅತಿಥಿ ಶಿಕ್ಷಕರ ಭರ್ತಿ ಹೊರತಾಗಿ ಇನ್ನು ಖಾಲಿ ಉಳಿದ ಪ್ರಾಥಮಿಕ ಶಾಲೆ-೨,೫೬೬ ಮತ್ತು ಪ್ರೌಢ ಶಾಲೆ-೫೨ ಸೇರಿದಂತೆ ಒಟ್ಟು ೨,೬೧೮ ಶಿಕ್ಷಕರ ಹುದ್ದೆಗಳಿಗೆ ಅಕ್ಷರ ಮಿತ್ರ ಪದನಾಮದಡಿ ಇದೇ ತಿಂಗಳ ಅಂತ್ಯಕ್ಕೆ ಭರ್ತಿ ಮಾಡಲು ಈಗಾಗಲೆ ಮಂಜೂರಾತಿ ನೀಡಿ ೧೮.೩೪ ಕೋಟಿ ರೂ. ಅನುದಾನ ನೀಡಿದೆ.
ಸಂವಿಧಾನದ ೩೭೧(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿಯೇ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ರಾಜ್ಯದ ೩೧ ಜಿಲ್ಲೆಗಳ ೧೬೧ ತಾಲೂಕುಗಳನ್ನು ತೀವ್ರ ಬರ ಪೀಡಿತ ಹಾಗೂ ೩೪ ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ ಎಂದು ತಿಳಿಸಿದರು.