ಬೆಂಗಳೂರು: ನಗರದಲ್ಲಿ ಗಣೇಶ ಚುತುರ್ಥಿಯ ಪ್ರಯುಕ್ತ ವಿಭಿನ್ನ ರೀತಿಯ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ-ಪುನಸ್ಕಾರಗಳನ್ನು ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ, ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ಕೋಟಿ ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳಿಂದ ದೇವಸ್ಥಾನವನ್ನು ಅಲಂಕರಿಸಿ ಮೋದಕಪ್ರಿಯನನ್ನು ಆರಾಧಿಸುತ್ತಿರುವುದು ಜನರ ಗಮನ ಸೆಳೆಯುತ್ತಿದೆ.
ಸುಮಾರು ೫೬ ಲಕ್ಷ ಮೌಲ್ಯದ ೫, ೧೦ ಮತ್ತು ೨೦ ರೂಪಾಯಿ ನಾಣ್ಯಗಳು ಮತ್ತು ೧೦, ೨೦, ೫೦, ೧೦೦, ೨೦೦ ಮತ್ತು ೫೦೦ ರೂಪಾಯಿಗಳ ನೋಟುಗಳೊಂದಿಗೆ ಹೂವಿನಂತೆ ಮಾಲೆಗಳನ್ನು ಮಾಡಿ ಅತ್ಯಾಕರ್ಷಕವಾಗಿ ಅಲಂಕಾರ ಮಾಡಿದ್ದಾರೆ.
ಟ್ರಸ್ಟಿ ರಾಮ್ ಮೋಹನ್ ರಾಜು ಮಾತನಾಡಿ, ಇಲ್ಲಿ ಸುಮಾರು ೨.೫ ಕೋಟಿ ರೂ ಮೌಲ್ಯದ ನೋಟು ಮತ್ತು ೫೬ ಲಕ್ಷ ರೂ ಮೌಲ್ಯದ ನಾಣ್ಯಗಳ ಮೂಲಕ ಅಲಂಕಾರ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ೧೫೦ ಜನ ಕೆಲಸದಲ್ಲಿ ತೊಡಗಿದ್ದರು. ಯಾವುದೇ ಸಮಸ್ಯೆ ಆಗದಂತೆ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಅಳವಡಿಸಿದ್ದೇವೆ. ನಾಣ್ಯಗಳಿಂದಲೇ ಗಣೇಶನ ಫೋಟೋ, ಜೈ ಕರ್ನಾಟಕ, ನೇಷನ್ ಫರ್ಸ್ಟ್, ವಿಕ್ರಮ್ ಲ್ಯಾಂಡರ್, ಚಂದ್ರಯಾನದ ಚಿತ್ರಗಳು ಮತ್ತು ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನು ರಚಿಸಲಾಗಿದೆ. ಭಕ್ತರು ಬಹಳ ಸಂತಸಗೊಂಡಿದ್ದಾರೆ ಎಂದರು.