ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದ ಮೂರನೇ ಆರೋಪಿ ಹೊಸಪೇಟೆ ಸಂಸ್ಥಾನ ಮಠದ ಅಭಿನವ ಹಾಲಶ್ರೀ ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಆರು ಜನ ಆರೋಪಿಗಳ ಬಂಧನವಾಗುತ್ತಿದ್ದಂತೆ ಅಭಿನವ ಹಾಲಶ್ರೀ ಸ್ವಾಮೀಜಿ ನಾಪತ್ತೆಯಾಗಿದ್ದರು. ತಲೆಮರೆಸಿಕೊಳ್ಳಲು ಸಂಚು ರೂಪಿಸಿದ್ದ ಆರೋಪಿ ಮೈಸೂರಿನಿಂದ ಒಡಿಶಾಗೆ ವಿವಿಧ ಮಾರ್ಗಗಳಲ್ಲಿ ತೆರಳಿ, ಭುವನೇಶ್ವರದಿಂದ ಭೋದ್ ಗಯಾಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಡಿಶಾದ ಕಟಕ್ ಬಳಿ ಬಂಧಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಉದ್ಯಮಿಗೆ ವಂಚಿಸಿದ ಆರೋಪದಡಿ ಚೈತ್ರಾ ಕುಂದಾಪುರ, ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್ ಹಾಗೂ ಪ್ರಜ್ವಲ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆತರುವ ವೇಳೆ, ಮಾಧ್ಯಮಗಳತ್ತ ನೋಡಿದ್ದ ಆರೋಪಿ ಚೈತ್ರಾ ‘ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಎಲ್ಲಾ ಸತ್ಯ ಹೊರಗಡೆ ಬರಲಿದೆ. ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗಲಿದೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಯಿದೆ. ಹಾಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.
ಸದ್ಯ ಅಭಿನವ ಹಾಲಶ್ರೀ ಸ್ವಾಮೀಜಿಯ ಬಂಧನವಾಗಿದ್ದು, ಇಂದು ಮಧ್ಯರಾತ್ರಿ ವೇಳೆಗೆ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. ವಿಚಾರಣೆಯ ಬಳಿಕ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರಾ ಅಥವಾ ತನಿಖಾಧಿಕಾರಿಗಳ ದಿಕ್ಕು ತಪ್ಪಿಸಲು ಚೈತ್ರಾ ಸುಳ್ಳು ಹೇಳಿದ್ದಾರಾ? ಎಂಬ ಸಂಗತಿ ಬಯಲಾಗಲಿದೆ.