Sunday, April 20, 2025
Google search engine

Homeರಾಜ್ಯಕುಡಿಯುವ ನೀರಿಗಾಗಿ ಜೈಲಿಗೆ ಹೋಗಲೂ ರೆಡಿ: ಮುಖ್ಯಮಂತ್ರಿ ಚಂದ್ರು

ಕುಡಿಯುವ ನೀರಿಗಾಗಿ ಜೈಲಿಗೆ ಹೋಗಲೂ ರೆಡಿ: ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ನಮ್ಮಲ್ಲಿ ಬರಗಾಲವಿದೆ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ? ಇದಕ್ಕಾಗಿ ಜೈಲಿಗೆ ಹೋದರೂ ರಾಜ್ಯದ ಹಿತಕ್ಕಾಗಿ ಹೋದಂತಾಗುತ್ತದೆ. ಆದ್ದರಿಂದ ಅಲ್ಲಿಗೆ ಹೋಗಲೂ ರೆಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ, ಆಮ್ ಆದ್ಮಿ ಪಕ್ಷದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ವೇಳೆ ಖಾಲಿ ಬಿಂದಿಗೆ, ಖಾಲಿ ಬಕೆಟ್ ಹಿಡಿದು ಪ್ರದರ್ಶಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಆಮ್ ಆದ್ಮಿ ಪಕ್ಷದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಕಾವೇರಿ ನೀರಿನ ಸಮಸ್ಯೆ ಹಲವು ದಶಕಗಳಿಂದ ಇದೆ. ಈ ಸಮಸ್ಯೆಗೆ ಸರ್ಕಾರದ ಇಚ್ಛಾ ಶಕ್ತಿಯ ಕೊರತೆಯೇ ಕಾರಣವಾಗಿದೆ. ರಾಜ್ಯಕ್ಕೆ ನೀರಿಲ್ಲ, ತಮಿಳುನಾಡಿಗೆ ಬಿಡಲು ಹೇಗೆ ಸಾಧ್ಯ? ತಕ್ಷಣ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ. ಮುಂದೆ ಏನೇ ಬಂದರೂ ಎದುರಿಸಲಿ, ನಾವೂ ಜೊತೆಗೆ ಇರುತ್ತೇವೆ ಎಂದರು.

ಕಾವೇರಿ ವಿಚಾರದಲ್ಲಿ ಮೂರೂ ಪಕ್ಷಗಳು ಜನರ ಹಿತವನ್ನು ಮರೆತಂತೆ ವರ್ತಿಸುತ್ತಿವೆ. ಆದ್ದರಿಂದ ಎಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕಿದೆ. ಸಾಹಿತಿಗಳು, ಚಲನಚಿತ್ರ ನಟರು, ಗಣ್ಯರು, ಬೆಂಗಳೂರು ನಿವಾಸಿಗಳು ಕೂಡ ಕಾವೇರಿ ನೀರಿನ ಹೋರಾಟಕ್ಕೆ ಇಳಿಯಬೇಕಿದೆ. ಕಾವೇರಿ ಇಲ್ಲದಿದ್ದರೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಜನ ಈಗಲೇ ಎಚ್ಚೆತ್ತುಕೊಂಡು ಹೋರಾಟಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ, ಮಾಧ್ಯಮ ಉಸ್ತುವಾರಿ ಜಗದೀಶ್ ವಿ ಸದಂ ಮತ್ತು ಅನಿಲ್ ನಾಚಪ್ಪ, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾವ್, ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ, ಎಎಪಿ ಯುವ ಘಟಕದ ಅಧ್ಯಕ್ಷ ಉಮೇಶ್ ಬಾಬು ಪಿಳ್ಳೇಗೌಡ, ಜಗದೀಶ್ ಚಂದ್ರ, ವಿಶ್ವನಾಥ್, ಮಹಾಲಕ್ಷ್ಮಿ, ಫರೀದ್, ಗುರುಮೂರ್ತಿ ಮತ್ತಿತರ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular