ಮೈಸೂರು: ಈ ಬಾರಿಯ ದಸರಾ ಚಲನಚಿತ್ರೋತ್ಸವವನ್ನು ಅ.೧೬ರಿಂದ ೨೨ರವರೆಗೆ ನಗರದ ಮಾಲ್ ಆಫ್ ಮೈಸೂರಿನಲ್ಲಿರುವ ಐನಾಕ್ಸ್‌ನಲ್ಲಿ ಹಮ್ಮಿಕೊಳ್ಳಲ್ಲಿದ್ದು, ಸದರಿ ಸ್ಥಳಕ್ಕೆ ದಸರಾ ಚಲನಚಿತ್ರೋತ್ಸವ ಉಪ ಸಮಿತಿಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಐನಾಕ್ಸ್ ಮ್ಯಾನೇಜ್‌ಮೆಂಟ್ ಜೊತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಐನಾಕ್ಸ್ ಚಿತ್ರಮಂದಿರದಲ್ಲಿ ಆಸನಗಳ ವ್ಯವಸ್ಥೆ, ಚಲನಚಿತ್ರಗಳ ವೇಳಾಪಟ್ಟಿ ಹಾಗೂ ಟಿಕೆಟ್ ವಿತರಣೆಯ ಸಂಬಂಧ ಹೊಸ ಸಾಫ್ಟ್‌ವೇರ್ ಆಪ್ ಅಭಿವೃದ್ಧಿಪಡಿಸಿ ಸಿನಿಮಾ ಪ್ರಿಯರನ್ನು ಆಕರ್ಷಿಸಲು ಆನ್‌ಲೈನ್ ಟಿಕೆಟ್ ವ್ಯವಸ್ಥೆ ಬಗ್ಗೆ ಹಾಗೂ ಅಗತ್ಯ ಸಿದ್ಧತೆಗಳಪರಿಶೀಲನೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ.ಎಂ.ಕೆ, ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ವಿ.ಪ್ರಿಯದರ್ಶಿನಿ, ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಉಪ ನಿರ್ದೇಶಕ ಅಶೋಕ್ ಕುಮಾರ್, ಸಹ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್.ಟಿ.ಕೆ. ಐನಾಕ್ಸ್ ಚಿತ್ರ ಮಂದಿರದ ಮ್ಯಾನೇಜರ್ ನಿಖಿಲ್ ಹಾಗೂ ಶ್ರೇಯಸ್ ಉಪಸ್ಥಿತರಿದ್ದರು.