ಚಾಮರಾಜನಗರ: ಶಾಲೆಗಳಿಗೆ ಪುಸ್ತಕಗಳನ್ನು ನೀಡಿ ಮಕ್ಕಳಲ್ಲಿ ಓದುವ ಹವ್ಯಾಸ, ಪ್ರವೃತ್ತಿ, ಸ್ಪೂರ್ತಿಯನ್ನು ತುಂಬುತ್ತಿರುವ ಜೀವ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಉತ್ತವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಂಗಳೂರಿನ ಜೀವ ಸಂಸ್ಥೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪುಸ್ತಕಗಳನ್ನು ನೀಡುವ ಹಾಗೂ ವರ್ಷವಿಡಿ ಪುಸ್ತಕಗಳನ್ನು ಓದುವ ಹಾಗೂ ಪುಸ್ತಕಗಳನ್ನು ಓದಿ ಅರ್ಥೈಸಿಕೊಂಡು ವಿವರ ನೀಡುವ ಕೌಶಲ್ಯವನ್ನು ಬೆಳೆಸುವ ದಿಕ್ಕಿನಲ್ಲಿ ಪುಸ್ತಕಗಳನ್ನು ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಪ್ರತಿಭೆಗಳು ರಾಷ್ಟ್ರದ ಆಸ್ತಿಯಾಗಿದೆ.
ಎಲ್ಲಾ ಸಾಧಕರು ಪುಸ್ತಕಗಳನ್ನು ಪ್ರೀತಿಸಿ ಅಧ್ಯಯನ ಮಾಡಿ ಪ್ರಪಂಚದ ಗಣ್ಯ ವ್ಯಕ್ತಿಗಳಾಗಿ ಸಾಧನೆಯ ಹಾದಿಯಲ್ಲಿ ಇದ್ದಾರೆ. ಪುಸ್ತಕಗಳು ಪ್ರೀತಿ ಪೂರ್ವಕ ಸ್ನೇಹಿತರಾದಾಗ ಪುಸ್ತಕದ ಬಗ್ಗೆ ಅಭಿಮಾನ ಬೆಳೆಸಿಕೊಂಡು ಅಧ್ಯಯನ ಮಾಡಿದಾಗ, ಮನಸ್ಸಿಗೆ ಆತ್ಮ ಸಂತೋಷ, ಆನಂದವನ್ನು ಉಂಟುಮಾಡುತ್ತದೆ. ಜ್ಞಾನ ಬಂಡಾರವನ್ನು ಶಬ್ದ ಸಂಪತ್ತನ್ನು, ಚಿಂತನೆಯನ್ನು ಬೆಳೆಸಲು ಪುಸ್ತಕಗಳು ಹಾಗೂ ಪತ್ರಿಕೆಗಳು ಉತ್ತಮ ಪರಿಣಾಮವನ್ನು ಉಂಟುಮಾಡುತ್ತದೆ. ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿರುವ ಜೀವ ಸಂಸ್ಥೆ ಗಡಿ ಭಾಗದಲ್ಲಿ ಇನ್ನೂ ಅನೇಕ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಓದುವ ಸಂಸ್ಕೃತಿಯನ್ನು ಕಟ್ಟಿ ಬೆಳೆಸೋಣ.
ಜಿಲ್ಲೆಯಲ್ಲಿ ಉತ್ತಮ ಉತ್ಸಾಹ ಭರಿತ ಶಿಕ್ಷಕ ವೃಂದವಿದೆ. ಶಿಕ್ಷಕರು ಮನಸ್ಸು ಮಾಡಿದಲ್ಲಿ ಶ್ರೇಷ್ಠ ರಾಷ್ಟ್ರವನ್ನು ಸಮಾಜವನ್ನು ರೂಪಿಸಬಹುದು. ಶಿಕ್ಷಕರು ಮಕ್ಕಳಲ್ಲಿ ಸ್ಪೂರ್ತಿಯನ್ನು ತುಂಬುವ ದಿಕ್ಕಿನಲ್ಲಿ ಒತ್ತಡ ರಹಿತವಾಗಿ ಕಾರ್ಯಯೋನ್ಮುಖರಾಗೋಣ. ಮಕ್ಕಳಿಗೆ ಕಥೆ ,ಕವನ ,ಸಾಹಿತ್ಯ ,ನಾಟಕ ಮೂಲಕ ಕಲಿಕೆಯಲ್ಲೂ ಪ್ರೇರಣೆ ಸಿಗಲಿದೆ. ಸಂಗೀತ, ನಾಟ್ಯ, ಕ್ರೀಡೆ, ಕಲೆ, ವಾದ್ಯ ಹೀಗೆ ಹತ್ತಾರು ಚಟುವಟಿಕೆಗಳನ್ನು ನಡೆಸಲು ಪ್ರೇರಣೆಯನ್ನು ನೀಡಬೇಕಾಗಿದೆ. ಸರ್ಕಾರ ಸಮಾಜ ಸಂಘ ಸಂಸ್ಥೆಗಳು ಸಹಾಯ ಹಸ್ತವನ್ನು ನೀಡುವ ಮೂಲಕ ಉತ್ತಮ ಪರಿಸರವನ್ನು ನಿರ್ಮಿಸಿ ಮಕ್ಕಳಲ್ಲಿ ಚೈತನ್ಯವನ್ನು ತುಂಬುತ್ತಿದೆ. ಉತ್ತಮ ಶಿಕ್ಷಣವನ್ನು ಪಡೆದು ಕುಟುಂಬಕ್ಕೆ ,ಗ್ರಾಮಕ್ಕೆ, ರಾಷ್ಟ್ರಕ್ಕೆ ಗೌರವವನ್ನು ತರುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳೋಣ. ವರ್ಷಕ್ಕೆ ಎರಡು ಬಾರಿ ಪ್ರತಿಯೊಬ್ಬರು ತಮಗೆ ಇಷ್ಟ ಬಂದ ಒಂದು ಪುಸ್ತಕ ಓದುವ ಹಾಗೂ ಅದರ ಸಾರವನ್ನು ತಿಳಿಸುವ ಕಾರ್ಯಕ್ರಮಗಳನ್ನು ರೂಪಿಸಿ ಉತ್ತಮ ಓದುಗರಿಗೆ ಬಹುಮಾನಗಳನ್ನು ನೀಡುವಲ್ಲಿ ನಾವೆಲ್ಲರೂ ಕಾರ್ಯಯೋನ್ಮುಖರಾಗೋಣ ಎಂದರು.

ಜೀವ ಸಂಸ್ಥೆಯ ಮುಖ್ಯಸ್ಥರಾದ ರಾಜೇಶ್ ರವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಗ್ರಂಥಾಲಯಗಳ ಸ್ಥಾಪನೆಗೆ ಪ್ರೇರಣೆ ನೀಡುವ ಹಾಗೂ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಓದುವ ಸಂಸ್ಕೃತಿಯನ್ನು ಬೆಳೆಸುವ ದಿಕ್ಕಿನಲ್ಲಿ ನಮ್ಮ ಸಂಸ್ಥೆ ಚಾಮರಾಜನಗರದ ಉತ್ತುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇಲಾಖೆಯ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗದವರಿಗೆ ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ಅವರು ಮಾತನಾಡಿ ಉತ್ತುವಳ್ಳಿ ಗ್ರಾಮದ ಶಾಲೆ ಶಿಕ್ಷಕರ ಕಾರ್ಯ ಸಾಧನೆಯಿಂದ ಶೈಕ್ಷಣಿಕ ವಾತಾವರಣ ಹಾಗೂ ಮಕ್ಕಳಲ್ಲಿ ಕಲಿಕೆಯ ಮಟ್ಟ ಹೆಚ್ಚತ್ತಿದೆ ಎಂದರು. ಮುಖ್ಯ ಶಿಕ್ಷಕ ನಾಗರಾಜು ,ಜೀವ ಸಂಸ್ಥೆಯ ಕಾರ್ಯದರ್ಶಿ ಸಂದೀಪ್ , ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.