ಬೆಂಗಳೂರು: ಕಾವೇರಿ ವಿಚಾರವಾಗಿ ಕನ್ನಡ ಚಿತ್ರರಂಗ ದನಿ ಎತ್ತಿದೆ. ವಿಕಾಸಸೌಧದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಟ ರಾಘವೇಂದ್ರ ರಾಜ್‌ಕುಮಾರ್, ನನ್ನ ತಂದೆ ಕೆಲ ವಿಚಾರ ಕಲಿಸಿಕೊಟ್ಟು ಹೋಗಿದ್ದಾರೆ. ನಾಡು, ನುಡಿ, ಭಾಷೆ ವಿಚಾರ ಬಂದಾಗ ಜೊತೆಗಿರಬೇಕೆಂದು ಹೇಳಿದ್ದಾರೆ. ಅದಕ್ಕಾಗಿ ಪ್ರಾಣ ಮುಡಿಪಾಗಿಡುತ್ತೇವೆ ಎಂದು ತಿಳಿಸಿದರು.
ಸದ್ಯ ಈ ವಿಚಾರ ನ್ಯಾಯಾಲಯದಲ್ಲಿದೆ. ನಮ್ಮ ನಮ್ಮ ಪಾತ್ರ ಬಂದಾಗ ಜನರೇ ನಮ್ಮನ್ನು ಕರೆಸಿಕೊಳ್ಳುತ್ತಾರೆ, ಆಗ ಬರುತ್ತೇವೆ. ಕೊನೆವರೆಗೂ ನಾವು ಜನರ ಜೊತೆ ಇರುತ್ತೇವೆ. ಎಲ್ಲರೂ ಸೇರಿ ಹೋರಾಟ ಮಾಡಬೇಕು. ನಮ್ಮನ್ನು ಯಾವಾಗ ಕರೆದರೂ, ಎಲ್ಲಿಗೆ ಕರೆದರೂ ನಾವು ಬರುತ್ತೇವೆ. ಇದು ನಮ್ಮ ಜವಬ್ದಾರಿ ಎನ್ನುವ ಮೂಲಕ ರಾಘವೇಂದ್ರ ರಾಜ್‌ಕುಮಾರ್ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಗೇಂದ್ರ, ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿದೆ. ನ್ಯಾಯಾಲಯದ ಗೌರವ ಕಾಪಾಡುವುದು ನಮ್ಮ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮರ್ಥರಿದ್ದಾರೆ. ನಾಡು, ನುಡಿ, ಜನರ ವಿಚಾರ ಬಂದಾಗ ಸಮರ್ಥವಾಗಿ ಎದುರಿಸುತ್ತಾರೆ. ಸದ್ಯ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿದೆ. ನ್ಯಾಯಾಲಯಕ್ಕೆ ಗೌರವ ಕೊಟ್ಟು ನೀರು ಬಿಡುವುದು ಒಂದು ಹಂತವಾದರೆ, ನಮ್ಮ ಜನರ ಹಿತ ಕಾಪಾಡುವುದು ಒಂದು ಸವಾಲು. ಅದರಲ್ಲಿ ನಮ್ಮ ನಾಯಕರು ಸಮರ್ಥರಿದ್ದಾರೆ ಎಂದು ತಿಳಿಸಿದರು.