ಚಾಮರಾಜನಗರ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡಿದ ಆದೇಶ ಕರ್ನಾಟಕಕ್ಕೆ ಮರಣ ಶಾಸನವಾಗಿದೆ ಎಂದು ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಖಾಲಿ ಮಡಿಕೆ ದೊಣ್ಣೆ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಚಾಮರಾಜನಗರ ಶ್ರೀ ಚಾಮರಾಜೇಶ್ವರ ದೇವಾಲಯದ ಉದ್ಯಾನವನ ಮುಂಭಾಗದಿಂದ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶ್ರೀ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಕಾವೇರಿ ನೀರು ಹಂಚಿಕೆ ಪ್ರಾಧಿಕಾರದಿಂದ ನಿರಂತರವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇದರ ಜೊತೆಗೆ ಸುಪ್ರಿಂ ಕೋರ್ಟ್ ಆದೇಶವೂ ಕರ್ನಾಟಕ್ಕೆ ಮಾರಕವಾದ ಆದೇಶವಾಗಿದೆ ಎಂದು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಆರೋಪಿಸಿ ಸುಪ್ರಿಂ ಕೋರ್ಟ್ ಮೇಲೆ ಇರುವ ನಂಬಿಕೆ ಹೋಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸ್, ಹಿರಿಯ ಚಳವಳಿಗಾರ ಶಾ.ಮುರಳಿ, ರವಿಚಂದ್ರಪ್ರಸಾದ್, ಗೋವಿಂದರಾಜು, ರಾಜ್ ಗೋಪಾಲ್, ಕುಮಾರ್, ಮಹೇಶ್ ಪಟೇಲ್ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.