ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಜಿದ್ದಾಜಿದ್ದಿನ ಕಣದಲ್ಲಿರುವ ಅಭ್ಯರ್ಥಿಗಳು ಮಂಡಳಿಯ ಚುನಾವಣಾ ರಣಕಣದಲ್ಲಿ ಯುದ್ದಕ್ಕೆ ಸಜ್ಜಾಗಿದ್ದಾರೆ. 2023ರ ಚುನಾವಣೆಯಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾರುವ ಹಿರಿಯ ನಿರ್ಮಾಪಕ ಎನ್.ಎಂ.ಸುರೇಶ್ ಸುದ್ದಿಗೋಷ್ಠಿ ನಡೆಸಿ ವಾಣಿಜ್ಯ ಮಂಡಳಿಯ ಶ್ರೇಯೋಭಿವೃದ್ದಿಗೆ ತಮ್ಮ ಯೋಜನೆಗಳನ್ನು ವಿವರಿಸಿದರು.
ತಮ್ಮ ನೇತೃತ್ವದ ತಂಡಕ್ಕೆ ಬೆಂಬಲ ಕೇಳುವುದರ ಜೊತೆಗೆ ವಾಣಿಜ್ಯ ಮಂಡಳಿಯ ಸಮಗ್ರ ಅಭಿವೃದ್ದಿಗೆ ಜೊತೆಯಾಗಿ ಎಂದು ಮನವಿ ಮಾಡಿಕೊಂಡರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸದ್ಯ ಉಂಟಾಗಿರುವ ಸಮಸ್ಯೆಗೆ ತಮ್ಮ ತಂಡದ ಸಂಪೂರ್ಣ ಬೆಂಬಲ ಇದೇ ಎಂದು ಎನ್. ಎಂ.ಸುರೇಶ್ ಘೋಷಿಸಿದರು.
ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಕಾವೇರಿಗಾಗಿ ಹಿಂದೆ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಚುನಾವಣಾ ಕಣದಲ್ಲಿರುವ ನಮ್ಮ ತಂಡ, ಸದಾ ಈ ಕನ್ನಡ ನಾಡಿನ ಅಸ್ಮಿತೆಯ ವಿಚಾರಗಳಿಗೆ ಬೆಂಬಲವಷ್ಟೆ ಅಲ್ಲದೆ ಯಾವುದೇ ಹಂತದ ಹೋರಾಟ ಅಥವ ತ್ಯಾಗಕ್ಕೆ ಸಿದ್ದರಿದ್ದೇವೆ ಎಂದು ಕಾವೇರಿ ಸಮಸ್ಯೆಗೆ ಬಹಿರಂಗ ಬೆಂಬಲ ಘೋಷಿಸಿದರು.
ಚಿತ್ರರಂಗದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ದೇಶದದಲ್ಲೇ ಒಂದು ಮಾದರಿ ಮಂಡಳಿಯನ್ನಾಗಿಸುವುದೇ ನಮ್ಮ ಗುರಿಯಾಗಿದೆ ಎಂದರು.ಈಗಾಗಲೇ ನನಗೆ ಸಿಕ್ಕಿರುವ ಸೇವೆಯ ಅವಕಾಶ ಬಳಸಿಕೊಂಡು ಹೊಂಬಾಳೆ ಫಿಲ್ಮ ಸಂಸ್ಥೆಯಿಂದ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ದೇಣಿಗೆ ತಂದಿದ್ದೇವೆ.
ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನಿಂದ 3 ಕೋಟಿ ಸಾಲ ಮಂಜೂರು ಮಾಡಿಸಿ ಕಟ್ಟಡ ಕಾಮಗಾರಿಗೆ ತ್ವರಿತ ರೂಪ ನೀಡಿದ್ದೇವೆ. ಇದು ಸೇವೆಗಾಗಿ ಸಿಕ್ಕ ವೇದಿಕೆಯಾಗಿದೆ. ಚಿತ್ರರಂಗದ ಋಣ ನನ್ನ ಮೇಲೆ ಸಾಕಷ್ಟು ಇದೆ. ಆದರೆ, ಅದನ್ನು ಸ್ವಲ್ಪ ಮಟ್ಟಿಗಾದರೂ ತೀರಿಸುವ ಕೆಲಸವನ್ನು ಈ ಚುನಾವಣೆಯ ಮೂಲಕ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ಅವರು ಹೇಳಿದರು.
ಎಂ.ಎನ್.ಸುರೇಶ್ ನೇತೃತ್ವದ ಈ ತಂಡಕ್ಕೆ ಮಾರ್ಗದರ್ಶಕರಾಗಿ ಹಿರಿಯ ನಿರ್ಮಾಪಕ, ಹೋರಾಟಗಾರ ಸಾ.ರಾ.ಗೋವಿಂದ್ ನಿಂತಿದ್ದಾರೆ. ತಂಡದಲ್ಲಿ ಉಪಾಧ್ಯಕ್ಷಸ್ಥಾನಕ್ಕೆ ವಿತರಕ ವಲಯದಿಂದ ಜಿ.ವೆಂಕಟೇಶ್ ಚಿಂಗಾರಿ ಬಿ ಮಹದೇವ್ ಹಾಗೂ ಪ್ರದರ್ಶಕದಿದ ಎಂ.ನರಸಿಂಹಲು ಸ್ಪರ್ಧೆಗಿಳಿದಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ರಾಜೇಶ್ ಬ್ರಹ್ಮಾವರ್, ವಿತರಕ ವಲಯದಿಂದ ಕೆ.ಪಾರ್ಥ ಸಾರಥಿ, ಖಜಾಂಚಿ ಸ್ಥಾನಕ್ಕೆ ದಯಾಳ್ ಪದ್ಮನಾಭನ್ ಸ್ಪರ್ಧೆ ಮಾಡುತ್ತಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲರೂ ಸುದ್ದಿಗೋಷ್ಠಿಯಲ್ಲಿ ಹಾಜರಾಗಿ ಚುನಾವಣೆಗೆ ಬೆಂಬಲ ಕೇಳಿದರು.