ಹೊಸೂರು : ಸಂಗೊಳ್ಳಿ ರಾಯಣ್ಣ ಮತ್ತು ಪುನೀತ್‌ರಾಜ್‌ಕುಮಾರ್ ರವರುಗಳು ಮರಣದ ನಂತರ ಜನರ ಮನಸ್ಸಿನಲ್ಲಿ ದೇವರಾಗಿದ್ದಾರೆ ಇಂತಹವರ ಪುತ್ಥಳಿಯನ್ನು ಸ್ಥಾಪಿಸಿರುವುದಕ್ಕೆ ಸಂಘಟಕರಿಗೆ ಮತ್ತು ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ದೊಡ್ಡೇಕೊಪ್ಪಲು ಗ್ರಾಮದಲ್ಲಿ ಬೆಂಗಳೂರು ಕನ್ನಡ ಪರ ಸಂಘಟನೆಯ ಡಿ.ಕೆ.ರಾಜುರವರು ಸ್ಥಾಪಿಸಿರುವ ಸಂಗೊಳ್ಳಿ ರಾಯಣ್ಣ ಮತ್ತು ಪುನೀತ್‌ರಾಜ್‌ಕುಮಾರ್ ಪುತ್ಥಳಿ ಅನಾವರಣ ಮಾಡಿ ಆನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದವರಲ್ಲಿ ಕಿತ್ತೂರು ಸಂಸ್ಥಾನ ಮೊದಲನೆಯದಾಗಿದ್ದು, ಸಂಗೊಳ್ಳಿ ರಾಯಣ್ಣ ಮೊದಲ ಹೋರಾಟಗಾರ ಇವರು ಸ್ವಾತಂತ್ರö್ಯಕ್ಕಾಗಿ ಹೋರಾಡಿ ನೇಣಿಗೆ ಶರಣಾಗುವುದರ ಜತೆಗೆ ರಾಜಮಾತೆ ಕಿತ್ತೂರು ರಾಣಿ ಚೆನ್ನಮ್ಮರವರಿಗೆ ನಿಷ್ಠರಾಗಿದ್ದರು ಇವರ ಪ್ರೇರಣೆಯಿಂದ ರಾಜ್ಯಾದ್ಯಂತ ಸಂಗೊಳ್ಳಿರಾಯಣ್ಣ ಸಂಘಗಳು ಸ್ಥಾಪನೆಯಾಗಿರುವುದನ್ನು ಕಾಣಬಹುದು ಎಂದರು.
ರಾಯಣ್ಣನವರ ಹೋರಾಟದ ಕಿಚ್ಚನ್ನು ಮನಗಂಡ ಸಂಗೊಳ್ಳಿ ಗ್ರಾಮದ ಯುವಕರು ದೇಶದ ಸೇನೆಯಲ್ಲಿ ಹೆಚ್ಚು ಮಂದಿ ಇರುವುದೇ ಸಾಕ್ಷಿ ಎಂದರಲ್ಲದೆ ಇದನ್ನು ಮನಗಂಡಿರುವ ಸರ್ಕಾರ ರಾಯಣ್ಣನ ಹೆಸರಿನಲ್ಲಿ ಹಲವು ಸೈನಿಕ ಶಾಲೆಗಳನ್ನು ಆರಂಭಿಸಿದೆ ಎಂದು ತಿಳಿಸಿದ ಶಾಸಕರು ಹಳೆ ಎಡತೊರೆಯ ಹಳೆ ರೈಲ್ವೆ ನಿಲ್ದಾಣದ ಬಳಿ ಸೈನಿಕ ಶಾಲೆ ಆರಂಭಿಸಲು ನಿರ್ಧರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಸಾಂಸ್ಕೃತಿಕ ಮತ್ತು ಮನರಂಜನಾ ರಾಯಭಾರಿ ಡಾ. ರಾಜ್‌ಕುಮಾರ್ ಕುಟುಂಬ ಗೋಕಾಕ್ ಚಳುವಳಿ ಸೇರಿದಂತೆ ಕನ್ನಡದ ಜಲ, ನೆಲ ಮತ್ತು ಭಾಷೆಯ ಉಳಿವಿಗಾಗಿ ಹೋರಾಟ ಮಾಡಿದ್ದಾರೆ.
ಈ ಕುಟುಂಬದ ಪುನೀತ್‌ರಾಜ್‌ಕುಮಾರ್ ಜೀವಿತಾವಧಿಯಲ್ಲಿ ಮಾಡಿದ ಜನಸೇವೆ ಮರಣದ ನಂತರ ಎಲ್ಲರೂ ಸ್ಮರಿಸುವಂತಾಗಿದೆ ಇಂತಹಾ ಮಹಾತ್ಮರ ಪುತ್ಥಳಿ ಅನಾವರಣ ಮಾಡಿರುವುದಕ್ಕೆ ತುಂಬ ಸಂತಸ ತಂದಿದೆ ಎಂದರು. ಪುನೀತ್‌ರವರು ದೊಡ್ಡ ನಟನ ಮಗನಾಗಿ ಐಷಾರಾಮಿ ಜೀವನಕ್ಕೆ ಆದ್ಯತೆ ನೀಡುವ ಬದಲು ಬಡವರು ಮತ್ತು ನಿರ್ಗತಿಕರಿಗೆ ತನ್ನಗೆ ಗೊತ್ತಿಲ್ಲದಂತೆ ಸಹಾಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಇವರ ಸೇವೆಯಿಂದ ರಾಜ್ಯದ ಯುವ ಜನತೆ ಮತ್ತು ಉಳ್ಳವರು ಹೆಚ್ಚಾಗಿ ಸೇವಾ ಕಾರ್ಯದಲ್ಲಿ ತೊಡಗುತ್ತಿರುವುದನ್ನು ಕಾಣುತ್ತಿದ್ದೇವೆ ಇಂತಹವರ ಪುತ್ಥಳಿ ಮಾಡುವುದರಿಂದ ಯುವ ಜನತೆಗೆ ಉತ್ತೇಜನ ನೀಡಿದಂತೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ನಗರದ ಲತಾ ಮತ್ತು ಡಿ.ಕೆ.ರಾಜು ದಂಪತಿಗಳು ಜೂನ್ ಮಾಹೆಯಲ್ಲಿ ನಡೆಯುವ ಡರ‍್ನಹಳ್ಳಿ ಗ್ರಾಮದ ಸಂತ ಅಂತೋಣಿಯವರ ಜಾತ್ರಾ ಮಹೋತ್ಸವಕ್ಕೆ ಕಳೆದ ೨೫ ವರ್ಷಗಳಿಂದ ಆಗಮಿಸುತ್ತಿದ್ದು ಚರ್ಚ್ಗೆ ತೆರಳುವ ಸ್ವಾಗತಾ ಕಮಾನು ಬಳಿ ಮಹಾತ್ಮರ ಪುತ್ಥಳಿ ಅನಾವರಣಗೊಳಿಸಲು ಲಕ್ಷಾಂತರ ರೂ ವ್ಯಯ ಮಾಡಿದ್ದಾರೆ ಇದಕ್ಕಾಗಿ ಡಿ.ಕೆ.ರಾಜು ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್.ವಿ.ದೇವರಹಟ್ಟಿ, ದೊಡ್ಡೇಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ಗಿರೀಶ್ ಮಾತನಾಡಿದರು. ಸಮಾರಂಭದಲ್ಲಿ ಪಂಚಾಯಿತಿ ಸದಸ್ಯರಾದ
ಭಾಗ್ಯಕರೀಗೌಡ, ಶ್ವೇತಾರವಿ, ಚೌಕಹಳ್ಳಿಶೇಖರ್, ಕುಮಾರ್, ಹೊಸಹಳ್ಳಿ ವಿಎಸ್‌ಎಸ್‌ಎನ್ ನಿರ್ದೇಶಕ ಲೋಕೇಶ್(ಗುಡ್ಡಪ್ಪ), ಮುಖಂಡರಾದ ದೊಡ್ಡಬುದ್ದಿಗೌಡ, ರಾಜೇಗೌಡ, ಬಸವರಾಜು, ರಾಮೇಗೌಡ, ಹರೀಶ್, ಮುನರ್‌ಪಾಷ್, ಲಕ್ಷö್ಮಣ್ಣಶೆಟ್ಟಿ, ಕೆಂಡಗಣ್ಣಸ್ವಾಮಿ, ಸುರೇಶ್, ಡೈವರ್‌ರಾಜು, ಪಿಡಿಒ ರಮೇಶ್, ಬಿಲ್‌ಕಲೆಕ್ಟರ್ ಮಹೇಶ್(ಕುರಿಸಿದ್ದ) ಮುಂತಾದವರು ಹಾಜರಿದ್ದರು.