Tuesday, April 22, 2025
Google search engine

Homeರಾಜಕೀಯನಾನು ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ: ನಿಖಿಲ್ ಕುಮಾರಸ್ವಾಮಿ

ನಾನು ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್​ಡಿಎ) ಜೆಡಿಎಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಭೇಟಿಯಾಗಿ ಆಶೀರ್ವಾದ ಪಡೆದರು.

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಖಾಸಗಿ ನಿವಾಸ ಧವಳಗಿರಿಗೆ ಇಂದು ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು‌. ಈ ವೇಳೆ ನಿಖಿಲ್ ಮುಂದಿನ ರಾಜಕೀಯ ಜೀವನಕ್ಕೆ ಬಿಎಸ್​ವೈ ಶುಭ ಕೋರಿದರು. ಎನ್​​ಡಿಎ ಗೆ ಜೆಡಿಎಸ್​​ ಸೇರ್ಪಡೆ ಹಿನ್ನೆಲೆಯಲ್ಲಿ ಪರಸ್ಪರರು ಅಭಿನಂದಿಸಿದರು. ಜೆಡಿಎಸ್ ನಾಯಕ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಪುತ್ರ ಸಿರೀಶ್ ಹಾಗೂ ಮಾಜಿ ಸಚಿವ ಮುನಿರತ್ನ ಸೇರಿ ಹಲವರು ಉಪಸ್ಥಿತರಿದ್ದರು.

ಮೈತ್ರಿ ವಿಚಾರವಾಗಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ನಿಖಿಲ್ ಕೂಡ ಉಪಸ್ಥಿತರಿದ್ದರು.

ಮಂಡ್ಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದ ನಿಖಿಲ್: ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಈಗ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ನಾನೆಂದೂ ರಾಜಕೀಯದಿಂದ ದೂರ ಹೋಗುತ್ತೇನೆ ಎಂದು ಹೇಳಿಲ್ಲ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ ರೇವಣ್ಣ ಅವರ ಸಂಪೂರ್ಣ ಬೆಂಬಲ ಇದೆ. ತಪ್ಪು ಸಂದೇಶ ಹೋಗೋದು ಬೇಡ. ನಾವೆಲ್ಲರೂ ಕುಳಿತು ಚರ್ಚೆ ಮಾಡಿಯೇ ನಿರ್ಧಾರ ಮಾಡಿದ್ದೇವೆ ಎಂದರು.

ದೇವೇಗೌಡರು ತೆಗೆದುಕೊಂಡಿರುವ ಮೈತ್ರಿ ನಿರ್ಧಾರದ ಹಿನ್ನೆಲೆಯಲ್ಲಿ ಕಾರ್ಯಕರ್ತನಾಗಿ ಯಡಿಯೂರಪ್ಪ ಅವರ ಆಶೀರ್ವಾದ ಪಡೆಯೋದು ನನ್ನ ಜವಾಬ್ದಾರಿ. ಹಿರಿಯರ ಆಶೀರ್ವಾದ ಪಡೆಯುವುದು ಒಂದು ಸಂಸ್ಕೃತಿ. ಹಾಗಾಗಿ ಆಶೀರ್ವಾದ ಪಡೆದಿದ್ದೇನೆ. ಬಿಜೆಪಿಯಲ್ಲಿ ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸ ಆಗಲಿದೆ. ಸೀಟು ಹಂಚಿಕೆ ಮುಂದಿನ ದಿನದಲ್ಲಿ ತೀರ್ಮಾನ ಆಗಲಿದೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಮತ್ತೆ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ನಿಖಿಲ್, ಮಂಡ್ಯ ಚುನಾವಣೆ ಬಗ್ಗೆ ಈಗ ಮಾತನಾಡುವುದು ಸರಿಯಾದ ಸಮಯ ಅಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾರ್ಯಕರ್ತರು, ಮುಖಂಡರು ತೀರ್ಮಾನ ಮಾಡುತ್ತಾರೆ. ಆದರೆ 28 ಲೋಕಸಭಾ ಕ್ಷೇತ್ರದಲ್ಲಿ ಜಂಟಿಯಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಶಾಸಕ ಮುನಿರತ್ನ, ಈ ಬೆಳವಣಿಗೆ ಚುನಾವಣೆ ಮೊದಲು ಆಗಿದ್ದರೆ ರಾಜ್ಯದಲ್ಲಿ 135 ವಿಧಾನಸಭಾ ಸೀಟುಗಳಲ್ಲಿ ನಾವಿರುತ್ತಿದ್ದೆವು. ಆದರೆ ಕಾರಣಾಂತರದಿಂದ ಆಗಿರಲಿಲ್ಲ. ಈಗ ಸಮಯ ಬಂದಿದೆ. ಇದರಿಂದ 28 ಲೋಕಸಭಾ ಕ್ಷೇತ್ರ ಗೆಲ್ಲಲು ಅನುಕೂಲ ಆಗಲಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇವೇಗೌಡರು, ಕುಮಾರಸ್ವಾಮಿ ಎಲ್ಲರೂ ಒಟ್ಟಾಗಿ ಚರ್ಚೆ ಮಾಡಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದರು.

ಮಂಡ್ಯ ಟಿಕೆಟ್ ಆಕಾಂಕ್ಷಿಯಲ್ಲ: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಾನು ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ, ಸ್ಪರ್ಧೆ ಬಗ್ಗೆ ಇನ್ನೂ ಯಾವುದೇ ರೀತಿಯ ಚಿಂತನೆ ನಡೆಸಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸ್ಪಷ್ಟಪಡಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ಮಾಡಿಲ್ಲ, ನಾನು ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಅಲ್ಲ, ಸದ್ಯ ಬಿಜೆಪಿ, ಜೆಡಿಎಸ್ ನಡುವೆ ಟಿಕೆಟ್ ಬಗ್ಗೆ ಚರ್ಚೆ ಆಗಿಲ್ಲ, ನಮಗೆ 28 ಕ್ಷೇತ್ರಗಳ ಮೇಲೂ ಗಮನ ಇದೆ. ಹಾಗಾಗಿ ಎನ್​​ಡಿಎ ಕೂಟಕ್ಕೆ ಈ ಬಾರಿ 28 ಕ್ಷೇತ್ರಕ್ಕೆ 28 ಕ್ಷೇತ್ರದಲ್ಲೂ ಗೆಲುವು ನಿಶ್ಚಿತ ಎಂದರು.

ರಾಜ್ಯದ ಜನತೆಗೆ, ನಮ್ಮ ರೈತರಿಗೆ ಕಳೆದ 200 ವರ್ಷಗಳಿಂದಲೂ ಆಗುತ್ತಿರುವ ಅನ್ಯಾಯ ಇದು. ತಾರತಮ್ಯದ ನಿರ್ಧಾರಗಳಾಗುತ್ತಿವೆ. ಸುಪ್ರೀಂ ಕೋರ್ಟ್ 5 ಸಾವಿರ ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ಬಿಡುವುದಕ್ಕೆ ಆದೇಶ ನೀಡಿದೆ. ಆದರೆ ಇದನ್ನು ಪಾಲಿಸಿದಲ್ಲಿ 7.5 ಟಿಎಂಸಿ ನೀರು 15 ದಿನಗಳಲ್ಲಿ ಖಾಲಿ ಆಗುತ್ತದೆ, ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ದೆಹಲಿಗೆ ಹೋದ ಸಂದರ್ಭದಲ್ಲಿ ಅಮಿಶ್ ಶಾ, ನಡ್ಡಾ ಜೊತೆ ಚರ್ಚೆ ಮಾಡಿದ್ದೇವೆ. ಪ್ರಧಾನಿ ಮೋದಿ ಗಮನ ಸೆಳೆಯುತ್ತೇವೆ. ಮಾಜಿ ಪಿಎಂ ದೇವೇಗೌಡರು ಸಹ ಪ್ರಧಾನಿ ಭೇಟಿ ಮಾಡಲಿದ್ದಾರೆ. ನಾನು ಸಹ ಈ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದರು.

RELATED ARTICLES
- Advertisment -
Google search engine

Most Popular