ಮಂಡ್ಯ: ಅಧಿಕಾರದಲ್ಲಿ ಇದ್ದು ನೀರು ಬಿಡಿಸುವುದಾದರೆ ಬರಬೇಡಿ ಎಂದು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವೇದಿಕೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದಾರೆ.
ನೀರು ಬಿಟ್ಟು ಅಧಿಕಾರದಲ್ಲಿ ಇರುವವರು ನಮಗೆ ಅವಶ್ಯಕತೆ ಇಲ್ಲ. ನಮ್ಮ ಹೋರಾಟಕ್ಕೆ ಬರುವುದಾದರೇ ರಾಜೀನಾಮೆ ಕೊಟ್ಟು ಬನ್ನಿ. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಕಾಂಗ್ರೆಸ್ಸಿಗರು ಬಂದಿದ್ದರು. ನಮ್ಮ ಮುಂದೆ ಬಂದು ಒಂದು ಹನಿಯನ್ನೂ ನೀರು ಬಿಡಲ್ಲ ಅಂದಿದ್ದರು. ನೀರು ಬಿಟ್ಟರೇ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ ಅಂದಿದ್ದರು. ಈಗ ನೀರು ಬಿಟ್ಟರೇ ಕಾಂಗ್ರೆಸ್ ನ ಒಬ್ಬರೂ ನಮ್ಮ ವೇದಿಕೆಗೆ ಬರಬೇಡಿ ಎಂದು ಕಿಡಿಕಾರಿದ್ದರು.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಧರಣಿಯಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದಕ್ಕೆ ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗೇ ನೀರಿಲ್ಲ, ಕೆರೆ-ಕಟ್ಟೆಗಳು ತುಂಬಿಲ್ಲ. ನಮ್ಮ ಕ್ಷೇತ್ರದಲ್ಲಿ ಬೆಳೆಗಳು ಒಣಗಿ, ಭೂಮಿ ಬರಡಾಗ್ತಿದೆ. ಆ ದೃಶ್ಯವನ್ನ ಕಣ್ಣಲ್ಲಿ ನೋಡೋಕೆ ಆಗ್ತಿಲ್ಲ. ಈ ಬಗ್ಗೆ ನಮ್ಮ ಕ್ಷೇತ್ರಕ್ಕೆ ಬಂದು ನೋಡಿ. ಆದ್ರೂ, ತಮಿಳುನಾಡಿಗೆ ನೀರು ಬಿಡಲಾಗ್ತಿದೆ. ಈ ಬಗ್ಗೆ ನಿನ್ನೆ ಜಗಳವನ್ನೇ ಮಾಡಿದ್ದೇನೆ. ನಮ್ಮದೇ ಸರ್ಕಾರ ಇದ್ದು, ಆಡಳಿತ ಪಕ್ಷದ ಶಾಸಕನಾಗಿ ನಾನು ಅಸಹಾಯಕ ಆಗಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ.
ಇದೆಲ್ಲವನ್ನೂ ಬಹಿರಂಗವಾಗಿ ಹೇಳಲು ಆಗಲ್ಲ. ಸಮಯ ಬಂದಾಗ ಎಲ್ಲವೂ ನಿಮಗೇ ಅರಿವಾಗಲಿದೆ. ಸರ್ಕಾರದ ನಡೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಶಾಸಕನೆಂಬುದ ಮರೆತು ರೈತನ ಮಗನಾಗಿ ಬಂದಿದ್ದೇನೆ. ನಾವೂ ಇಂದು ಆಡಳಿತ ಪಕ್ಷದಲ್ಲಿದ್ದೇವೆ. ಆದ್ರೆ ಸಂಕಷ್ಟ ಸೂತ್ರ ಕಂಡುಕೊಳ್ಳದೆ ಎಲ್ಲರು ಲೋಪ ಎಸಗಿದ್ದೇವೆ. ಸಂಕಷ್ಟ ಸೂತ್ರಕ್ಕೆ ಎಲ್ಲ ರಾಜ್ಯಗಳು ಮುದ್ರೆ ಒತ್ತಿದರೇ ಎಲ್ಲರಿಗು ಸಮಪಾಲು-ಸಮಬಾಳು ಆಗುತ್ತೆ. ಆದರೆ ಅದಕ್ಕೆ ಮುಂದಾಗದೆ ಬಾಯಿ ಬಡಿದುಕೊಳ್ಳುವವರು ನಾವೇ. ಅನ್ಯಾಯ ಆಗುತ್ತಿರೋದು ನಮಗೆ. ಮಂಡ್ಯದ ನಾಗಕರಿಕನಾಗಿ ನೀರು ನಿಲ್ಲಿಸಬೇಕು ಅಂತಾ ಹೇಳ್ತೀನಿ ಎಂದರು.
ಸಮಸ್ಯೆಯಾದ ಸಂದರ್ಭ ಮಾತಾಡಿ, ಬೇರೆ ಸಂದರ್ಭ ಮೈ ಮರೆತು ಕುಳ್ತಿದ್ದೀವಿ. ನಮಗೆ ತಿನ್ನಲು ಇಲ್ಲದಾಗ ಬೇರೆಯವನಿಗೆ ಅನ್ನ ಕೊಡು ಅಂದ್ರೆ ಹೇಗೆ?. ಈ ವರ್ಷ ನಮಗೆ ಭಗವಂತನೆ ದಾರಿ ತೋರಿಸಬೇಕು. ಯಾವ ಕಾನೂನು, ಸರ್ಕಾರವು ನಮಗೆ ದಾರಿ ಕೊಡಲ್ಲ.
ಮಂಡ್ಯದ ಹಿತಕ್ಕಾಗಿ ಎಲ್ಲ ತ್ಯಾಗಕ್ಕು ನಾನು ಸಿದ್ದ. ಬಿಜೆಪಿ ಮೇಲೆ ಕಾಂಗ್ರೆಸ್, ಕಾಂಗ್ರೆಸ್ ಮೇಲೆ ಬಿಜೆಪಿ ಬೆರಳು ತೋರುತ್ತಿರುವ ವಿಚಾರ. ಪ್ರಾಧಿಕಾರ ಕೇಂದ್ರ ಸರ್ಕಾರದ ಅಡಿ ಕೆಲಸ ಮಾಡ್ತಿದೆ. ಎಷ್ಟು ಜನ ಬಿಜೆಪಿ ಸಂಸದರಿದ್ದಾರೆ? ಇದರಲ್ಲಿ ರಾಜಕೀಯ ಮಾಡದೇ ತಪ್ಪು ಒಪ್ಪಿಕೊಂಡು ಕಾನೂನು ಮೂಲಕ ಜಯ ಪಡೆಯಬೇಕು ಎಂದು ಹೇಳಿದರು.
ಓಲೈಕೆಗಾಗಿ ಆದೇಶಕ್ಕು ಮುನ್ನವೇ ನೀರು ಬಿಟ್ಟ ವಿಚಾರವಾಗಿ ಮಾತನಾಡಿ, ಮೌಖಿಕ ಸೂಚನೆ ಮೇರೆಗೆ ನೀರು ಬಿಡಲಾಗಿದೆ. ಒಕ್ಕೂಟದ ವ್ಯವಸ್ಥೆಯಲ್ಲಿರೋದೆ ನಮಗೆ ಸಮಸ್ಯೆ. ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳನ್ನ ನೋಡಿಕೊಳ್ಳಬೇಕಾದದ್ದು ಯಾರು. ಕಾವೇರಿ ವಿವಾದಕ್ಕೆ ಕೇಂದ್ರ ಕಾರಣ ಎಂದು ಬೆರಳು ತೋರಿಸಿದ್ದಾರೆ.
ಸಿಎಂ ಜೊತೆ ನಾನು ಮಾತನಾಡಿದ್ದೇನೆ. ಸುಪ್ರೀಂ ಆದೇಶ ಧಿಕ್ಕರಿಸಿ ನಿಲ್ಲೋಕೆ ಆಗಲ್ಲ ಅಂತಿದ್ದಾರೆ. ನಾನು ವೈಯಕ್ತಿಕವಾಗಿ ಕಾವೇರಿ ವಿಚಾರದಲ್ಲಿ ಮಾತನಾಡ್ತೇನೆ ಎಂದರು.
ಪ್ರಾಧಿಕಾರದ ಆದೇಶಕ್ಕು ಮುನ್ನ ನೀರು ಬಿಟ್ಟ ವಿಚಾರಕ್ಕೆ ಹೆಚ್ಡಿಕೆ ಹೇಳಿಕೆಗೆ ನರೇಂದ್ರಸ್ವಾಮಿ ಕಿಡಿಕಾರಿದ್ದು, ಕುಮಾರಸ್ವಾಮಿ ಪಕ್ಷದ ರಾಜಕೀಯ ವಿಚಾರಕ್ಕೆ ಡೆಲ್ಲಿಗೆ ಹೋಗಿದ್ದರು. ಪ್ರಧಾನ ಮಂತ್ರಿಗಳು ನಮಗೆ ಸಮಯ ಕೊಡ್ತಿಲ್ಲ. ನಿಮ್ಮನ್ನು ತಬ್ಬಿಕೊಂಡು ಮುತ್ತಿಕ್ಕುತ್ತಿದ್ದೀರಲ್ಲ. ಒಂದು ಮಾತು ಕಾವೇರಿ ಬಗ್ಗೆ ಮಾತಾಡಬೇಕಿತ್ತಲ್ಲ. ಅತಿ ಹೆಚ್ಚು ನಿಮ್ಮ ಪರವಾಗಿ ತ್ಯಾಗ ಮಾಡಿದ, ಜೊತೆ ನಿಂತಿದ್ದು ಮಂಡ್ಯ ಜನ. ಅವರ ಪರ ನಿಂತು ಮಾತನಾಡಿ ಬಂದು ಹೇಳಿದ್ರೆ ನಾನು ಒಪ್ಪಿಕೊಳ್ತಿದ್ದೆ ಎಂದು ತಿಳಿಸಿದರು.
ಕಾವೇರಿ ವಿಚಾರದಲ್ಲಿ ಧೃಢ ನಿರ್ಧಾರ ತೆಗೆದುಕೊಳ್ಳಬೇಕು
ಕಾವೇರಿ ವಿಚಾರದಲ್ಲಿ ಧೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಒತ್ತಾಯಿಸಿದರು.
ನಿನ್ನೆ ಖುದ್ದು ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಮಾತನಾಡಿದ್ದೇವೆ. ಸೆ.26 ರಂದು CWRC ಸಭೆ ಮುಂದೆ ನೀರು ಬಿಡಲು ಆಗಲ್ಲ ಎನ್ನುತ್ತೇವೆ ಎಂದಿದ್ದಾರೆ. ಅಂತಹ ಧೃಢ ನಿರ್ಧಾರ ತೆಗೆದುಕೊಳ್ಳಬೇಕೆನ್ನುವುದು ಕೂಡ ನಮ್ಮ ಒತ್ತಾಯ ಎಂದರು.
ಸೆ.29 ಕ್ಕೆ ಕರ್ನಾಟಕ ಬಂದ್ ಗೆ ಕರೆಕೊಡಲಾಗಿದೆ. ಕಾವೇರಿ ವಿಚಾರದಲ್ಲಿ ಯಾರೆ ಹೋರಾಟ ಮಾಡಿದ್ರು ಅದಕ್ಕೆ ನಮ್ಮ ಬೆಂಬಲ ಇರುತ್ತೆ. ಒಗ್ಗಟ್ಟಾಗಿ ಒಂದೇ ವೇದಿಕೆಯಲ್ಲಿ ಹೋರಾಟ ನಡೆಸಲು ನಾವು ಕೂಡ ಪ್ರಯತ್ನ ಮಾಡ್ತೇವೆ ಎಂದು ತಿಳಿಸಿದರು.