ಮಂಡ್ಯ: ಇಂದು ಕಾಂಗ್ರೆಸ್ ಬಣ್ಣ ಬಯಲಾಗಿದೆ. ಇವತ್ತು ಅಧಿಕಾರ ಇದೆ ಎಂದು ಅಧಿಕಾರದ ಅಮಲಿನಲ್ಲಿ ಹೋರಾಟ ಮರೆತು ಹೋಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ವತಿಯಿಂದ ನಡೆಯುತ್ತಿರುವ ಚಡ್ಡಿ ಚಳವಳಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಲ್ಕು ತಿಂಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಸಾಕಷ್ಟು ನಿರೀಕ್ಷೆಯನ್ನು ಕಾಂಗ್ರೆಸ್ ಹುಟ್ಟಿ ಹಾಕಿದ್ರು. ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ರು. ನೀರಾವರಿ ಹೋರಾಟವನ್ನು ಕಾಂಗ್ರೆಸ್ ಮಾಡ್ತಾ ಇದ್ದರು. ಇದಕ್ಕಾಗಿ ರಾಜ್ಯದ ಜನ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರು. ನಾವು ಕಾಂಗ್ರೆಸ್ ಸರ್ಕಾರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೋ. ಡಿಕೆ ಶಿವಕುಮಾರ್ ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದ್ರು. ನಮ್ಮ ನೀರು, ನಮ್ಮ ಹಕ್ಕು ಎಂಬ ಹೋರಾಟ ಮಾಡಿದ್ರು. ಎಲ್ಲಿ ಹೋಯ್ತು ನಮ್ಮ ನೀರು ನಮ್ಮ ಹಕ್ಕು ಎಂಬ ಶಿವಕುಮಾರ್ ಹೋರಾಟ. ಕಾವೇರಿ ವಿಚಾರದಲ್ಲಿ ಎಲ್ಲಿ ಹೋಯಿತು ಆ ಹೋರಾಟ ಎಂದು ಪ್ರಶ್ನಿಸಿದರು.
ಕಾವೇರಿ ಕೊಳ್ಳದಲ್ಲಿ ನೀರು ಇಲ್ಲದ ಸ್ಥಿತಿ ಬಂದಿದೆ. ಮನೆಗೆ ಮಾರಿ ಊರಿಗೆ ಉಪಕಾರಿ ಎಂದು ಕಾಂಗ್ರೆಸ್ ಧೋರಣೆ ಇದೆ. ಇದನ್ನು ಬಿಜೆಪಿ ಖಂಡಿಸುತ್ತೆ ಎಂದರು.
ಪಕ್ಷಾತೀತವಾಗಿ ರಾಜ್ಯದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. INDIA ಕೂಟವನ್ನು ಖುಷಿ ಪಡಿಸಲು ರೈತರ ಗಮನವರಿಸುತ್ತಿಲ್ಲ. ಇದರ ಬದಲು ತಮಿಳಿನಾಡಿಗೆ ನೆರವು ಕೊಡಲು ಹೋಗಿದ್ದೀರಾ. ಇದು ಅಕ್ಷಮ್ಯ ಅಪರಾಧ. ರೈತರ ವಕ್ರ ದೃಷ್ಟಿಗೆ ಬಲಿಯಾದ್ರೆ, ರೈತರ ಶಾಪಕ್ಕೆ ಸರ್ಕಾರ ಬಲಿಯಾಗುತ್ತದೆ. ಕಾವೇರಿ ವಿಚಾರದಲ್ಲಿ ಸರ್ಕಾರದ ನಡವಳಿಕೆ ರೈತರ ಪರವಾಗಿ ಇದ್ದೀವಿ ಎಂದು ತೋರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಕಚೇರಿ ಬಳಿ ಚಡ್ಡಿ ಚಳವಳಿ ನಡೆಯುತ್ತಿದ್ದು, ಬಳಿಕ ಮಂಡ್ಯದ ಸಂಜಯ್ ಸರ್ಕಲ್ ನಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೂ ಚಡ್ಡಿ ಮೆರವಣಿಗೆ ನಡೆಸಲಾಯಿತು.
ಈ ವೇಳೆ ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಾಯಿ ಬಡಿದುಕೊಂಡು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.