Monday, April 21, 2025
Google search engine

Homeರಾಜ್ಯಸುದ್ದಿಜಾಲಕಾವೇರಿ ಜಲ ವಿವಾದ: ರಾಜ್ಯ ಸರ್ಕಾರದ ವೈಫಲ್ಯ ಕಾರಣ -ಹೆಚ್.ಡಿ.ದೇವೇಗೌಡ

ಕಾವೇರಿ ಜಲ ವಿವಾದ: ರಾಜ್ಯ ಸರ್ಕಾರದ ವೈಫಲ್ಯ ಕಾರಣ -ಹೆಚ್.ಡಿ.ದೇವೇಗೌಡ

ಬೆಂಗಳೂರು: ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ತಲೆದೋರಿರುವ ಕಾವೇರಿ ಜಲ ವಿವಾದದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.

ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಪ್ರಧಾನಿಗಳ ಗಮನಕ್ಕೆ ತಂದಿರುವ ವಾಸ್ತವಾಂಶಗಳ ಆಧಾರದಡಿ ಕೇಂದ್ರ ಸರ್ಕಾರ ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಒಂದು ಅರ್ಜಿ ಹಾಕಿಸಬೇಕು. ಅವರಿಗೆ ಸಿಕ್ಕಿರುವ ಮಾಹಿತಿ ಆಧಾರದಲ್ಲಿ ನಿಷ್ಪಕ್ಷಪಾತವಾದ ತಜ್ಞರ ಸಮಿತಿಯನ್ನು ಕಳುಹಿಸಿ ಎಲ್ಲಾ ಜಲಾಶಯಗಳ ಪರಿಶೀಲನೆ ಮಾಡಿ ನೀರು ಬಿಡಲು ಸಾಧ್ಯವಾ? ಬೆಳೆ ಸ್ಥಿತಿಗತಿ ಏನು? ಯಾವ ಯಾವ ಜಲಾಶಯಗಳಲ್ಲಿ ಎಷ್ಟು ನೀರಿದೆ? ಎಂಬುದನ್ನು ಅರಿತುಕೊಳ್ಳಬೇಕು. ಈಗಾಗಲೇ ಅನ್ಯಾಯ ಆಗೋಗಿದೆ. ಮುಂದಾದರೂ ಆಗುವ ಅನ್ಯಾಯವನ್ನು ತಡೆಗಟ್ಟಲು ಜಲ ಶಕ್ತಿ ಇಲಾಖೆಗೆ ಹೇಳಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ತಜ್ಞರ ಸಮಿತಿಯನ್ನು ಕಳುಹಿಸಲು ನಿವೇದನೆ ಮಾಡಬೇಕು ಎಂದು ಪ್ರಧಾನಿಗೆ ಪ್ರಾರ್ಥನೆ ಮಾಡುತ್ತೇನೆ ಎಂದರು.

ನಾಳೆ ಬೆಂಗಳೂರು ಬಂದ್ ಕರೆ ನೀಡಲಾಗಿದೆ. ಮಂಡ್ಯ, ಮೈಸೂರು ಹೀಗೆ ಹಲವಾರು ಕಡೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುತ್ತಾ ಕೆಆರ್‌ಎಸ್ ಜಲಾಶಯದ ಬರಿದಾದ ಒಣಗಿದ ಭೂಮಿ ಕಾಣುವ ಫೋಟೋ ಪ್ರದರ್ಶನ ಮಾಡಿ ಕಾವೇರಿ ಪ್ರಚಾರದ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ದಯಮಾಡಿ ಕೆಆರ್‌ಎಸ್ ಜಲಾಶಯದ ವಸ್ತುಸ್ಥಿತಿಯನ್ನು ಪ್ರತಿಬಿಂಬಿಸುವ ಈ ಫೋಟೋವನ್ನು ಪ್ರಸಾರ ಮಾಡಿ ಪ್ರಧಾನಿಯವರಿಗೆ ತಲುಪುವಂತೆ ಮಾಡಿ ಎಂದು ಕಳಕಳಿಯಿಂದ ದೇವೇಗೌಡರು ಮನವಿ ಮಾಡಿದರು.

ಮೊದಲು ಹತ್ತು ಸಾವಿರ ಕ್ಯೂಸೆಕ್ ನೀರು ಬಿಡಿ ಎಂದರು, ನಂತರ ಎರಡನೇ ಬಾರಿ ೫೦೦೦ ಕ್ಯೂಸೆಕ್ ನೀರು ಬಿಡಿ ಎಂದರು. ಎಂತಹ ದೌರ್ಭಾಗ್ಯ ನಮ್ಮದು. ಇದರಲ್ಲಿ ನಾನು ಸುಪ್ರೀಂ ಕೋರ್ಟ್‌ನ ದೂರಲ್ಲ, ಇದು ರಾಜ್ಯ ಸರ್ಕಾರದ ವೈಫಲ್ಯ. ೪೦ ಲಕ್ಷ ಹೆಕ್ಟೇರ್ ಭೂಮಿ ಬೆಳೆದಿದೆ, ಫಸಲು ಇದೆ. ಆದರೆ ಅದಕ್ಕೆ ನೀರು ಕೊಡಲಾಗದ ಸ್ಥಿತಿ ಇದೆ. ಇದನ್ನೇ ನಾನು ರಾಜ್ಯಸಭೆಯಲ್ಲಿ ನಿಂತು ಮೂರನೇ ವ್ಯಕ್ತಿಗಳ ನಿಯೋಗ ಕಳುಹಿಸಿಕೊಡಿ, ನಮ್ಮ ಸಂಕಷ್ಟ ನೋಡಿ ಎಂದು ಕಣ್ಣೀರು ಹಾಕಿದ್ದೆ ಎಂದರು.

ನಮ್ಮ ಪಕ್ಷದ ಪರವಾಗಿ ಕುಮಾರಸ್ವಾಮಿ ಸರ್ವ ಪಕ್ಷ ಸಭೆಯಲ್ಲಿ ನಮ್ಮ ಸಲಹೆ ನೀಡಿದರು. ಆದರೆ ಅದಕ್ಕೆ ಅವರು ಕೊಟ್ಟ ಗೌರವ ಏನು ಹಾಗಾಗಿ ಮತ್ತೆ ರಾಜ್ಯ ಸರ್ಕಾರಕ್ಕೆ ನಮ್ಮ ಪಕ್ಷ ಸಲಹೆ ಕೊಡಲ್ಲ ಎಂದರು. ಹಿಂದೆ ಮನಮೋಹನ್ ಸಿಂಗ್ ಗೆ ಕಾವೇರಿ ವಿಚಾರದಲ್ಲಿ ಮನವಿ ಮಾಡಿದಾಗ ನಾನು ಸರ್ಕಾರವನ್ನು ಉಳಿಸಿಕೊಳ್ಳಬೇಕು. ಇನ್ನೂ ಒಂದು ವರ್ಷ ಸರ್ಕಾರ ನಡೆಸಬೇಕು. ಹಾಗಾಗಿ ನೀವು ನ್ಯಾಯಾಲಯದಲ್ಲಿ ಈ ಸಮಸ್ಯೆ ಪರಿಹರಿಸಿಕೊಳ್ಳಿ ಎಂದಿದ್ದರು. ನಾಲ್ವರು ರಾಜ್ಯದ ಮಂತ್ರಿಗಳು ಇದ್ದರು. ಆಗ ಇವರಿಗೆ ಕರ್ನಾಟಕ ನೆನಪಿಗೆ ಬರಲಿಲ್ಲ, ಯಾಕೆಂದರೆ ತಮಿಳುನಾಡಿನಲ್ಲಿ ೪೦ ಸಂಸದರಿದ್ದರೆ ಕರ್ನಾಟಕದಲ್ಲಿ ೨೮ ಮಾತ್ರ. ಹಾಗಾಗಿ ತಮಿಳುನಾಡಿನ ವಿರುದ್ಧ ಯಾರೂ ಮಾತನಾಡಲಿಲ್ಲ ಎಂದರು.

ನಾಳೆ ಬಂದ್ ನಡೆಯಲಿ, ಬಂದ್ ವಿಷಯದಲ್ಲಿ ಕುಮಾರಸ್ವಾಮಿ ಬೆಂಬಲ ಕೊಟ್ಟಿದ್ದಾರೆ. ಶಾಂತಿಯುತವಾಗಿ ಬಂದ್ ಮಾಡಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮನವಿ ಮಾಡಿದರು. ರಾಜಕೀಯವಾಗಿ ನಾವು ಎನ್‌ಡಿಎ ಸೇರುವ ನಿರ್ಧಾರ ಕೈಗೊಳ್ಳಲು ಕಾರಣ ಏನು ಎಂದು ಇನ್ನೆರಡು ದಿನ ಬಿಟ್ಟು ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ. ಇಂದು ಕೇವಲ ಕಾವೇರಿ ವಿಚಾರಕ್ಕೆ ಸೀಮಿತವಾಗಿ ಮಾತನಾಡುತ್ತೇನೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular