ಮಂಡ್ಯ: ಜಿಲ್ಲೆಯಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಇಂದು ಬೆಂಗಳೂರು ಜೊತೆಗೆ ಮಂಡ್ಯದ ಕೆ.ಆರ್.ಪೇಟೆ ಹಾಗೂ ಮಳವಳ್ಳಿ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.
ಕಾವೇರಿ ಜೊತೆಗೆ ಹೇಮಾವತಿ ಒಡಲು ಖಾಲಿ ಭೀತಿ ಹಿನ್ನಲೆ ಕೆ.ಆರ್.ಪೇಟೆ ಬಂದ್ ಗೆ ರೈತ, ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆಕೊಟ್ಟಿದ್ದು, ಬಿಜೆಪಿ, ಜೆಡಿಎಸ್ ಸಾಥ್ ನೀಡಿವೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕೆ.ಆರ್.ಪೇಟೆ ಪಟ್ಟಣ ಸ್ತಬ್ಧವಾಗಲಿದೆ. ಇತ್ತ ಮಳವಳ್ಳಿ ಪಟ್ಟಣ ಬಂದ್ ಗೆ ಜೆಡಿಎಸ್ ನ ಮಾಜಿ ಶಾಸಕ ಡಾ.ಅನ್ನದಾನಿ ಕರೆ ನೀಡಿದ್ದಾರೆ.
ಇನ್ನು ಎಂದಿನಂತೆ ರೈತ ಹಿತ ರಕ್ಷಣಾ ವೇದಿಕೆ ಹಾಗೂ ಭೂಮಿತಾಯಿ ಹೋರಾಟ ಸಮಿತಿಯಿಂದ ಪ್ರತಿಭಟನೆ ಮುಂದುವರಿಯಲಿದೆ.
ಮಳವಳ್ಳಿ ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದು, ಆಸ್ಪತ್ರೆ, ಮೆಡಿಕಲ್, ಹಾಲಿನ ಬೂತ್ ತೆರೆದಿವೆ.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಬೆಳ್ಳಂಬೆಳ್ಳಿಗೆ ಬೈಕ್ ರ್ಯಾಲಿ ನಡೆಸಲಾಗಿದ್ದು, ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಮನವಿ ಮಾಡಲಾಗಿದೆ.

ಪಟ್ಟಣಾದ್ಯಾಂತ ಪೊಲೀಸ್ ಬಂದೋಬಸ್ತ್
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ವಿವಿಧ ಸಂಘಟನೆಗಳಿಂದ ಮಳವಳ್ಳಿ ಪಟ್ಟಣದ ರಾಜ್ ಕುಮಾರ್ ವೃತ್ತದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಹೆದ್ದಾರಿ ತಡೆದು ಪ್ರತಿಭಟನೆಗೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಲಾಗಿದೆ. ಹೆದ್ದಾರಿ ತಡೆಯದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ರಸ್ತೆಯಲ್ಲಿ ಉರುಳಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.