ಬೆಂಗಳೂರು: ಕಾವೇರಿ ವಿಚಾರಕ್ಕಾಗಿ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನಾಕಾರರು ಬೆಳಗ್ಗೆ ಬೀದಿಗಿಳಿದು ಹೋರಾಟ ನಡೆಸಿದರು. ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸಿದಿರುವುದನ್ನು ಖಂಡಿಸಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಬೇಕೇ ಬೇಕು ನ್ಯಾಯಬೇಕು ಎಂದು ಆಗ್ರಹಿಸಿದರು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ಕೆಲಕಾಲ ಹೈಡ್ರಾಮ ನಡೆಯಿತು. ಅಂತಿಮವಾಗಿ ಬಿಎಂಟಿಸಿ ಬಸ್‌ಗಳಲ್ಲಿ ಮೂಲಕ ಪ್ರತಿಭಟನಾಕಾರರನ್ನು ಪೊಲೀಸರು ಕರೆದುಕೊಂಡು ಹೋದರು.

ಬೆಂಗಳೂರು ಬಂದ್ ಬಿಸಿ ಜನಸಾಮಾನ್ಯರಿಗೆ ಅಷ್ಟಾಗಿ ತಟ್ಟಿಲ್ಲ. ಬಿಎಂಟಿಸಿ ಸೇರಿ ಖಾಸಗಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಿಲ್ಲ. ಎಂದಿನಂತೆ ಆಟೋ ಸಂಚಾರವಿದೆ. ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಓಲಾ-ಉಬರ್ ಸೇರಿ ಕ್ಯಾಬ್ ಆಧಾರಿತ ಸೇವೆಯಲ್ಲಿ ಯಾವುದೇ ತೊಡಕಾಗಿರುವುದು ಕಂಡುಬಂದಿಲ್ಲ.
ಬಂದ್ ಬಗ್ಗೆ ಸಾರ್ವಜನಿಕರಲ್ಲಿ ಉಂಟಾದ ಗೊಂದಲದಿಂದ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ಹಾಗೂ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಿಂದುಮುಂದು ನೋಡುತ್ತಿದ್ದಾರೆ. ಬಹುತೇಕ ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲದಿರುವುದು ಕಂಡುಬಂತು. ಸಿಟಿ ಮಾರುಕಟ್ಟೆ ಕಾಂಪ್ಲೆಕ್ಸ್‌ನಲ್ಲಿ ಬಂದ್ ಬೋರ್ಡ್ ಅಳವಡಿಸಲಾಗಿದ್ದು, ಸಂಜೆ ೬ ಗಂಟೆ ತನಕ ಅಂಗಡಿ ಮುಂಗಟ್ಟುಗಳು ಬಂದ್ ಎಂದು ನಮೂದಿಸಲಾಗಿದ್ದು, ಇದಕ್ಕೆ ಕೆ.ಆರ್.ಮಾರುಕಟ್ಟೆ ಸಂಘದಿಂದ ಬೆಂಬಲ ವ್ಯಕ್ತವಾಗಿದೆ.

ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಬಂದ್ ಪರಿಣಾಮ ಬೀರಿಲ್ಲ. ಆತಂಕದಲ್ಲೇ ಏರ್‌ಪೋರ್ಟ್‌ನತ್ತ ಬಂದ ಪ್ರಯಾಣಿಕರು ಎಂದಿನಂತೆ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ನಿಟ್ಟುಸಿರುಬಿಟ್ಟು ತಮ್ಮ ಪ್ರಯಾಣ ಮುಂದುವರೆಸಿದ್ದಾರೆ. ವಿಮಾನ ನಿಲ್ದಾಣ ಇಂದು ಎಂದಿನಂತೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಮಧ್ಯಾಹ್ನ ಮತ್ತು ಸಂಜೆ ಇರುವ ವಿಮಾನಗಳಿಗೆ ಮುಂಚಿತವಾಗಿ ಬಂದಿರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಸಾಮಾನ್ಯವಾಗಿತ್ತು. ಏರ್ಪೋರ್ಟ್‌ಗೆ ಬರುವ ವಾಹನ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಉಂಟಾಗಿಲ್ಲ. ಎಂದಿನಂತೆ ಓಲಾ, ಉಬರ್, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕಂಡುಬಂತು.
ಬೆಂಗಳೂರು ಬಂದ್ ಪರಿಣಾಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಪ್ರತಿ ದಿನ ಪ್ರಯಾಣಿಕರಿಂದ ತುಂಬಿರುತ್ತಿದ್ದ ನಮ್ಮ ಮೆಟ್ರೋ ರೈಲುಗಳು ಇಂದು ಬಹುಪಾಲು ಖಾಲಿ ಖಾಲಿ ಕಾಣುತ್ತಿದ್ದವು. ರಾಜಭವನದ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಇದೇ ವೇಳೆ ಕರವೇ ಅಧ್ಯಕ್ಷ ನಾರಾಯಣ ಗೌಡ ಸೇರಿ ಕೆಲವು ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಶಾಪಿಂಗ್ ಮಾಲ್ ಬಂದ್: ಬೆಂಗಳೂರು ಬಂದ್‌ಗೆ ಕೆಲ ಶಾಪಿಂಗ್ ಮಾಲ್‌ಗಳು ಬೆಂಬಲ ಸೂಚಿಸಿವೆ.
