ಬೆಂಗಳೂರು: ಪ್ರತಿದಿನ 5 ಸಾವಿರ ಕ್ಯೂಸೆಕ್ನಂತೆ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಇಂದು (ಸೆ.26) ಬೆಂಗಳೂರು ಬಂದ್ ಗೆ ಕರೆ ನೀಡಿದೆ.
ಬೆಳಗ್ಗೆ 6 ಗಂಟೆಗೆ ಆರಂಭವಾದ ಬೆಂಗಳೂರು ಬಂದ್ ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ. ಈ ಬಂದ್ ಗೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ನೀಡಿರುವುದು ಕಾವು ಹೆಚ್ಚಿಸಿದೆ.
ಬಂದ್ ಗೆ ಅವಕಾಶವಿಲ್ಲ ಎಂದು ಪೊಲೀಸರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಬಲವಂತದ ಬಂದ್ ಮತ್ತು ರ್ಯಾಲಿಗಳನ್ನು ನಡೆಸುವಂತಿಲ್ಲ ಎಂದಿದ್ದಾರೆ. ಬಲವಂತವಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸುವುದು ಅಥವಾ ವಾಹನಗಳನ್ನು ತಡೆದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಸೋಮವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಗಳ ಓಡಾಟ ಎಂದಿನಂತಿದ್ದರೂ ಜನರು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗಿಳಿದಿಲ್ಲ. ಹೋಟೆಲ್ ಗಳು ತೆರೆದಿದ್ದರೂ ಗ್ರಾಹಕ ಸಂಖ್ಯೆ ಕಡಿಮೆ ಕಂಡುಬಂತು.
ಬೆಂಗಳೂರು ಬಂದ್ ಗೆ ಬಿಎಂಆರ್ ಸಿಎಲ್ ನೈತಿಕ ಬೆಂಬಲ ಸೂಚಿಸಿದೆ. ಬಂದ್ ನಡುವೆಯೂ ಬೆಳ್ಗೆಯಿಂದಲೇ ನಮ್ಮ ಮೇಟ್ರೋ ಓಡಾಟ ಆರಂಭವಾಗಿದೆ.
ಬಂದ್ ನಡುವೆಯೇ ಎಂದಿನಂತೆ ಬಿಎಂಟಿಸಿ ಮತ್ತು ಕೆಎಸ್ ಆರ್ಟಿಸಿ ಸಂಚಾರ ನಡೆಸಿವೆ. ಕೆಎಸ್ ಆರ್ ಟಿಸಿ ಬಸ್ಗಳು ರಾಜ್ಯದ ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸುತ್ತಿವೆ.
ಚಿತ್ರೋದ್ಯಮ ಸಂಪೂರ್ಣ ಬೆಂಬಲ: ಬೆಂಗಳೂರು ಬಂದ್ ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲ ಸೂಚಿಸಿದೆ. ಸಿನಿಮಾ ಶೂಟಿಂಗ್ ಬಂದ್ ಆಗಿದ್ದು, ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಸ್ಥಗಿತ ಮಾಡಲಾಗಿದೆ. ಟೆಲಿವಿಷನ್ ಅಸೋಸಿಯೇಷನ್ ಕೂಡ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸೀರಿಯಲ್ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಗಳು ನಡೆಯುತ್ತಿಲ್ಲ.
ಹಲವರ ಬಂಧನ: ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಕುರುಬೂರು ಶಾಂತಕುಮಾರ್ ಅವರನ್ನು ವಶಕ್ಕೆ ಪಡೆದರು.