ಬಳ್ಳಾರಿ:ಜಿಲ್ಲೆಯಲ್ಲಿ ರೈತರು ಆದಾಯಕ್ಕನುಗುಣವಾಗಿ ಮೆಣಸಿನ ಕಾಯಿ ಬೆಳೆಯನ್ನೇ ಅವಲಂಬಿಸಿದ್ದಾರೆ. ಆದರೆ ದುಪ್ಪಟ್ಟು ದರದಲ್ಲಿ ಮೆಣಸಿನ ಕಾಯಿ ಬೀಜ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಪತ್ತೆಹಚ್ಚಬೇಕು. ಅಂತವಹರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಖಡಕ್ ಸೂಚನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕುರುಗೋಡು ಇವರ ಸಂಯುಕ್ತಾಶ್ರಯದಲ್ಲಿ ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಂಪ್ಲಿ ಮತ್ತು ಕುರುಗೋಡು ತಾಲೂಕುಗಳ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಂಪ್ಲಿ ಮತ್ತು ಕುರುಗೋಡು ತಾಲೂಕುಗಳಲ್ಲಿ ರೈತರು ಬಹುಪಾಲು ಮೆಣಸಿನ ಕಾಯಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ ರೈತರಿಗೆ ಬೆಳೆಯ ಆರೈಕೆ ಕುರಿತು ಮಾಹಿತಿ ಸಿಗುತ್ತಿಲ್ಲ. ಅಧಿಕಾರಿಗಳು ಕ್ಷೇತ್ರ ಭೇಟಿ ನಡೆಸಬೇಕು. ಬೆಳೆ ನಿರ್ವಹಣೆ ಕುರಿತು ಮಾಹಿತಿ ನೀಡಬೇಕು. ರೈತ ಸಂಪರ್ಕ ಕೇಂದ್ರಗಳಿಗೆ ರೈತರು ಭೇಟಿ ನೀಡುವಂತೆ ಅವರಿಗೆ ತಿಳಿಸಬೇಕು ಎಂದು ಹೇಳಿದರು.
ಈಗಾಗಲೇ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದು, ಕೃಷಿ, ತೋಟಗಾರಿಕೆ ಹಾಗೂ ಇನ್ಸೂರೆನ್ಸ್ ಕಂಪನಿಯವರು ಜಂಟಿಯಾಗಿ ಈ ಭಾಗದ ನಿಜ ಬೆಳೆ ಹಾನಿ ಸಮೀಕ್ಷೆ ಆದಷ್ಟುತ್ವರಿತವಾಗಿ ನಡೆಸಿ, ನೈಜ ವರದಿಯನ್ನು ನೀಡಬೇಕು. ಈ ತಿಂಗಳ ಅಂತ್ಯದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬೆಳೆ ವಿಮೆಗೆ ಹೆಚ್ಚೆಚ್ಚು ರೈತರು ನೋಂದಾಯಿಸಿಕೊಳ್ಳುವಂತೆ ಅವರಿಗೆ ತಿಳಿಸಬೇಕು. ಬರ ಪರಿಹಾರಕ್ಕೆ ಅರ್ಹ ರೈತರನ್ನೇ ಪರಿಗಣಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು, ಕಂಪ್ಲಿ ಮತ್ತು ಕುರುಗೋಡು ತಾಲೂಕುಗಳಿಗೆ 100 ಬೆಡ್ ವ್ಯವಸ್ಥೆಯ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಪ್ರಸ್ತಾಪಿಸಿದರು. ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಈ ಭಾಗದಲ್ಲಿ ಸದ್ಯದ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಡಿಸೆಂಬರ್ ಅಂತ್ಯದೊಳಗೆ ಸಮಸ್ಯೆ ತಲೆದೋರಬಹುದು. ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು. ನೀರಿನ ಸೋರುವಿಕೆ ತಡೆಗಟ್ಟಬೇಕು. ಓವರ್ ಹೆಡ್ ಟ್ಯಾಂಕ್ ಗಳನ್ನು ಒಂದುವರೆ ತಿಂಗಳಿಗೊಮ್ಮೆ ಸ್ವಚ್ಚಗೊಳಿಸಿ, ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಕುಡಿಯಲು ಸರಬರಾಜು ಮಾಡಬೇಕು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಕಲುಷಿತ ನೀರು ಸೇವನೆ ಪ್ರಕರಣ ಮಾಹಿತಿ ಸಚಿವರು ತಿಳಿಸಿದರು.
ಕಂಪ್ಲಿ ಮತ್ತು ಕುರುಗೋಡು ತಾಲೂಕುಗಳ 24 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಗೆ ಒಳಪಡುತ್ತವೆ. ಇದಕ್ಕೆ ಮುಂಜಾಗ್ರತೆಯಾಗಿ ಗ್ರಾಪಂ ಅನುದಾನದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿ ಸಭೆಗೆ ತಿಳಿಸಿದರು.
ರೈತರಿಗೆ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್ ಸಮಸ್ಯೆ ತಲೆದೋರಬಾರದು. ವಿದ್ಯುತ್ ಪರಿವರ್ತಕಗಳು ಸುಟ್ಟಾಗ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಹಿನ್ನಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ದಮ್ಮೂರು ಗ್ರಾಮದಲ್ಲಿ ನಡೆದ ದುರ್ಘಟನೆ ಮರುಕಳಿಸಬಾರದು ಎಂದು ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಈ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯಿದೆ ಪ್ರಕರಣ ಸೃಷ್ಟಿಗೆ ಅವಕಾಶ ನೀಡಬಾರದು ಎಂದರು. ಕುರುಗೋಡು ಮತ್ತು ಬಳ್ಳಾರಿ ತಾಲೂಕು ಭಾಗದ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯು ಇಲ್ಲಿಯೇ ಇದ್ದು, ಶಾಲಾ ಮಕ್ಕಳಿಗೆ ಅನುಕೂಲಕ್ಕಾಗಿ ಪ್ರತ್ಯೇಕಿಸಬೇಕು ಎಂದು ತಹಶೀಲ್ದಾರ ರಾಘವೇಂದ್ರ ಅವರು, ಸಭೆಯ ಗಮನ ಸೆಳೆದರು. ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಇದೊಂದು ಒಳ್ಳೆಯ ನಿರ್ಧಾರವಾಗಿದ್ದು, ಈ ಕುರಿತು ಚರ್ಚಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಯ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಭಿತ್ತಚಿತ್ರಗಳನ್ನು ಬಿಡುಗಡೆಗೊಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
