ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಜಾತ್ಯತೀತ ನಿಲುವಿನ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತಾಗಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು ಖಡಕ್ ಉತ್ತರ ನೀಡಿದರು.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ದೇವೇಗೌಡರು ಮಾತನಾಡುತ್ತಾ, ನಾವು ಕಿಂಚಿತ್ತೂ ಕೂಡಾ ಸೆಕ್ಯುಲರ್ ವಿಚಾರ ತೆಗೆದು ಹಾಕುವ ಮನಸ್ಸು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಬಿಜೆಪಿ ನಾಯಕರನ್ನು ಭೇಟಿ ಮಾಡುವ ಮೊದಲು, ನಾನು ಗೃಹ ಸಚಿವ ಅಮಿತ್ ಶಾ ಬಳಿ ಚರ್ಚೆ ಮಾಡಿದ್ದೇನೆ. ಕದ್ದುಮುಚ್ಚಿ ಮಾತನಾಡುವ ಅಗತ್ಯ ಇಲ್ಲ. ಕರ್ನಾಟಕ ಪರಿಸ್ಥಿತಿಯೇನು ಅಂತ ಅಮಿತ್ ಶಾ ಅವರ ಬಳಿ ಎಲ್ಲಾ ವಿಚಾರ ಮಾತಾಡಿದ್ದೇನೆ. ನಾವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಕಳೆದ ೬೦ ವರ್ಷಗಳ ನನ್ನ ಹೋರಾಟದಲ್ಲಿ ಯಾವುದೇ ಸಮುದಾಯಕ್ಕೂ ಈ ಪಕ್ಷದಿಂದ ಅನ್ಯಾಯ ಆಗಲು ಬಿಟ್ಟಿಲ್ಲ ಎಂದರು.
ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ತೆಗೆದದ್ದು ಯಾರು?. ೧೭ ಜನ ಎಂಎಲ್‌ಎಗಳನ್ನು ಮುಂಬೈಗೆ ಕಳುಹಿಸಿದ್ದು ಯಾರು?. ಬಿಜೆಪಿ ಸರ್ಕಾರ ಬರಲು ಅವಕಾಶ ಕೊಟ್ಟಿದ್ದು ಯಾರು? ಇದೆಲ್ಲಾ ಚರ್ಚೆ ಆಗಲಿ, ಚರ್ಚೆ ಮಾಡೋಣ. ಯಾರು ಇದಕ್ಕೆಲ್ಲ ಕಾರಣ, ಕುಮಾರಸ್ವಾಮಿ ಅವರಾ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎಂದು ಯಾರಾದರೂ ಮನೆ ಬಾಗಿಲಿಗೆ ಹೋಗಿದ್ರಾ?. ಅವರೇ ನಮ್ಮ ಮನೆ ಬಾಗಿಲಿಗೆ ಬಂದದ್ದು. ಯಾವ ಕಾರಣಕ್ಕೂ ಸಹವಾಸ ಬೇಡ ಎಂದು ಹೇಳಿದ್ದೆ. ಆಗ ನನಗೆ ಒತ್ತಾಯ ಮಾಡಿದ್ರು” ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕರಾದ ಕೆ.ಆರ್.ಪೇಟೆಯ ಮಂಜುನಾಥ್, ತುರುವೇಕೆರೆ ಎಂ.ಟಿ. ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಉಪಸ್ಥಿತರಿದ್ದರು.