ಬೆಂಗಳೂರು: ತಮಿಳುನಾಡಿಗೆ ಕಾವೇರಿ ಹರಿಬಿಡುತ್ತಿರುವುದನ್ನು ವಿರೋಧಿಸಿ ನಾಳೆ(ಸೆಪ್ಟೆಂಬರ್ 29) ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ನಾಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಸಿಗುವುದು ಅನುಮಾನವಾಗಿದೆ.
ವಿವಿಧ ಸಂಘಟನೆಗಳ ಬೆಂಬಲ
ನಾಳಿನ ಕರ್ನಾಟಕ ಬಂದ್ ಗೆ ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಕರವೇ ಶಿವರಾಮೇಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ಓಲಾ, ಉಬರ್ ಸಂಘ, ಆದರ್ಶ್ ಆಟೋ ಚಾಲಕರ ಸಂಘ ಬೆಂಬಲಿಸಿದೆ. ಖಾಸಗಿ ಶಾಲಾ ವಾಹನ ಚಾಲಕರು ನೈತಿಕ ಬೆಂಬಲ ನೀಡಿದ್ದಾರೆ. ಗೂಡ್ಸ್ ವಾಹನ, ಖಾಸಗಿ ವಾಹನ ಮಾಲೀಕರು, ಲಾರಿ ಮಾಲೀಕರು ಹಾಗೂ ಚಾಲಕರು ಸೇರಿ ಹಲವರು ಬೆಂಬಲ ನೀಡಿದ್ದಾರೆ.
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್
ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಸಂಪೂರ್ಣ ಬಂದ್ ಇರಲಿದೆ. ಶುಕ್ರವಾರ ಬೆಳಗ್ಗೆ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ಱಲಿ ಹಮ್ಮಿಕೊಂಡಿರೋ ಕನ್ನಡ ಪರ ಹೋರಾಟಗಾರರು, ಟೋಲ್‌ಗಳಿಗೆ ಮುತ್ತಿಗೆ ಹಾಕಿ ರೈಲು, ಹೆದ್ದಾರಿ ತಡೆಯೋದಕ್ಕೂ ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣಗಳಿಗೆ ಮುತ್ತಿಗೆ ಹಾಕೋದಾಗಿ ವಾಟಾಳ್ ನಾಗರಾಜ್ ಹೇಳಿದ್ದಾರೆ. ಅಲ್ಲದೇ, ಬೀದರ್ ನಿಂದ ಚಾಮರಾಜನಗರವರೆಗೆ, ಕೋಲಾರದಿಂದ ಮಂಗಳೂರಿನವರೆಗೆ ಜಿಲ್ಲೆ ಜಿಲ್ಲೆಯಲ್ಲೂ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ನಾಳೆ ಏನಿರಲ್ಲ?
ನಾಳೆ ಕರ್ನಾಟಕ ಬಂದ್ ದಿನ ಹೋಟೆಲ್ ಗಳು ಇರಲ್ಲ, ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಿರುವುದರಿಂದ ಚಿತ್ರಮಂದಿರಗಳು ಕ್ಲೋಸ್ ಆಗಿರಲಿವೆ. ಇನ್ನುಳಿದಂತೆ ಮಾಲ್ಗಳು, ಆಟೋ, ಕ್ಯಾಬ್, ಓಲಾ, ಉಬರ್ ಖಾಸಗಿ ಬಸ್ಗಳು ರಸ್ತೆಗೆ ಇಳಿಯಲ್ಲ. ಬೇಕರಿಗಳು ಕ್ಲೋಸ್ ಆಗಿರಲಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಂದ್ ಬಿಸಿ ತಟ್ಟಲಿದೆ. ಶಾಲಾ-ಕಾಲೇಜುಗಳು ಓಪನ್ ಆಗೋದು ಡೌಟ್ ಎನ್ನಲಾಗಿದೆ.
ಏನೆಲ್ಲಾ ಇರುತ್ತೆ?
ಇನ್ನು ನಾಳೆ ಏನೆಲ್ಲಾ ಇರುತ್ತೆ ಎನ್ನುವುದನ್ನು ನೋಡೋದಾದ್ರೆ ಕರ್ನಾಟಕ ಬಂದ್ ವೇಳೆ ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್ಗಳು, ಆಂಬುಲೆನ್ಸ್, ಹಾಲಿನ ಅಂಗಡಿ ಎಂದಿನಂತೆ ತೆರೆದಿರುತ್ತವೆ.
ಉಳಿದಂತೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ ಗಳು, ಶಾಲೆ-ಕಾಲೇಜುಗಳು, ಮತ್ತು ಮೆಟ್ರೋ ಸೇವೆ ಹಾಗೂ ಸರ್ಕಾರಿ ಕಚೇರಿಗಳ ಬಗ್ಗೆ ಈವರೆಗೂ ನಿರ್ಧಾರವಾಗಿಲ್ಲ.