ಜಿ.ಪಂ ಉಪ ಕಾರ್ಯದರ್ಶಿಧಿಕಾರಿ ಡಾ.ಕೃಷ್ಣರಾಜು
ನಂಜನಗೂಡು,ಜೂ.೦೮:- ೨೦೨೩-೨೪ ನೇ ಸಾಲಿಗೆ ನಂಜನಗೂಡು ತಾಲ್ಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಗಳಿಗೆ ಸರ್ಕಾರ ೧೪೫.೧೬ ಕೋಟಿ ರೂ ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಕೆಲಸ ಮಾಡಲು ಅನುಮೋದನೆ ಸಹ ನೀಡಲಾಗಿದೆ ಎಂದು ಮೈಸೂರು ಜಿ. ಪಂ.ಉಪಕಾರ್ಯದರ್ಶಿ ಮತ್ತು ನಂಜನಗೂಡು ತಾಲ್ಲೂಕು ಪಂಚಾಯತಿ ಆಡಳಿತಾಧಿಕಾರಿಗಳು ಆದ ಡಾಕ್ಟರ್ ಕೃಷ್ಣಂರಾಜ್ ರವರು ತಿಳಿಸಿದರು.
ಗುರುವಾರ ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೊದಲ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಂಜನಗೂಡು ವರುಣಾ ಕ್ಷೇತ್ರ ಮುಖ್ಯ ಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯನವರು ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಅಧಿಕಾರಿಗಳು ತುಂಬ ಎಚ್ಚರಿಕೆಯಿಂದ ಜವಾಬ್ದಾರಿ ಯುತವಾಗಿ ಕೆಲಸ ನಿರ್ವಹಿಸಬೇಕು. ಕಛೇರಿಗಳಿಗೆ ಬರುವ ಸಾರ್ವಜನಿಕರಿಗೆ ಸ್ಪಂದಿಸಿ, ಸಕಾಲದಲ್ಲಿ ಅವರ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈಗಾಗಲೇ ತಾಲೂಕು ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಲೋಪ ದೋಷ ನಡೆಯುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಮುಂದಾದರು ಈ ರೀತಿಯ ಲೋಪ ದೋಷಗಳು ಬಾರದಂತೆ ನೋಡಿಕೊಂಡು ನಿಮ್ಮ ಬಳಿ ಬಂದ ಸಾರ್ವಜನಿಕರೋಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು.ಯಾವಾಗಲೂ ಮಾನವೀಯತೆ ಆಡಳಿತ ನಡೆಸಬೇಕು ಎಂದು ಅಧಿಕಾರಿಗಳಿಗೆ ಡಾ.ಕೃಷ್ಣರಾಜ ಎಚ್ಚರಿಕೆ ನೀಡಿದರು.
ಪಶು ಆಸ್ಪತ್ರೆಯಲ್ಲಿ ಕೊರತೆ ಇರುವ ಸಿಬ್ಬಂದಿಗಳ ನೇಮಕ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.