ಹುಬ್ಬಳ್ಳಿ-ಧಾರವಾಡ/ಹಾವೇರಿ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವದನ್ನು ಖಂಡಿಸಿ ಕರ್ನಾಟಕ ಬಂದ್‌ಗೆ ಹುಬ್ಬಳ್ಳಿ, ಧಾರವಾಡ ಮತ್ತು ಹಾವೇರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಮಹದಾಯಿ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ಹೊಸೂರ ವೃತ್ತದಲ್ಲಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಸೇರಿದಂತೆ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಕಾವೇರಿ ನಮ್ಮದು, ಕಾವೇರಿ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದರೇ ಆಟೋ ಸಂಚಾರ, ಬಸ್ ಸಂಚಾರ ಯಥಾಸ್ಥಿತಿ ಇದೆ. ಶಾಲಾ ಕಾಲೇಜು, ಸರ್ಕಾರಿ ಇಲಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಕೇವಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಯಲಿದೆ. ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡಿದ್ದರಿಂದ ಚೆನ್ನಮ್ಮ ವೃತ್ತ, ಹೊಸೂರು ವೃತ್ತ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ವಿವಿಧ ಪ್ರದೇಶಗಳಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಬಂದ್ ಬೆಂಬಲಿಸಿ ರೈತನೋರ್ವ ಏಕಾಂಕಿಯಾಗಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಹಳಿಯಾಳ ದಾಂಡೇಲಿ ಕಡೆಯಿಂದ ಬರುತ್ತಿದ್ದ ಬಸ್‌ಅನ್ನು ರೈತ ಮುಖಂಡ ನಿಂಗಪ್ಪ ದಿವಟಗಿ ತಡೆದಿದ್ದಾರೆ. ಇನ್ನೂ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ ಮುಧೋಳ ರಕ್ತದಲ್ಲಿ ಕಾವೇರಿ ನಮ್ಮದು ಎಂಬ ಬರಹ ಬರೆದರು. ಬಳಿಕ ಉರುಳು ಸೇವೆ ಮಾಡಿ ಕಾವೇರಿಗಾಗಿ ಪ್ರತಿಭಟಿಸಿದರು.