ಮೈಸೂರು : ರಾಜಕೀಯ ಹೊರತುಪಡಿಸಿ, ಕಾನೂನಿಗೆ ಭಂಗ ಬಾರದ ರೀತಿಯಲ್ಲಿ ಬಲವಂತ ಮಾಡದೇ ಬಂದ್ ಮಾಡಲು ಎಲ್ಲರಿಗೂ ಅವಕಾಶ ಇದೆ. ಬಂದ್ ವಿಚಾರದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಇಂದು ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಜೊತೆ ಆಗಮಿಸಿರುವ ಸುಮಾರು ೨೫೦ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಸಾಂಪ್ರದಾಯಕವಾಗಿ ಉಪಹಾರ ವ್ಯವಸ್ಥೆಯಲ್ಲಿ ಸಚಿವರು ಸ್ವತಃ ಉಪಹಾರ ಬಡಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಭಾರತ ದೇಶ ಚಳವಳಿ, ಪ್ರತಿಭಟನೆ ಮೂಲಕ ಸ್ವಾತಂತ್ರ್ಯ ಪಡೆದಿದೆ. ಆದರೆ, ಐತಿಹಾಸಿಕ ಚಳವಳಿ ಅಹಿಂಸೆ, ಅಸಹಕಾರ ಚಳವಳಿಯ ಮೂಲಕ ಪ್ರತಿಭಟನೆ ನಡೆಸಿ ಬಲವಂತವಾಗಿ ಬಂದ್ ಮಾಡಬೇಡಿ. ಕಾವೇರಿ ವಿಚಾರದಲ್ಲಿ ಸಭೆ ನಡೆಸಿ ಮೇಲ್ಮನವಿ ಸಲ್ಲಿಸುತ್ತೇವೆ.
ರಾಜಕೀಯ ನಿರ್ಧಾರವಾಗಲಿ, ಪ್ರತಿಭಟನೆ, ಹೋರಾಟಗಳಾಗಲಿ ತಮಿಳುನಾಡಿನ ರಾಜಕೀಯದಲ್ಲಿರುವ ಒಗ್ಗಟ್ಟು ಕರ್ನಾಟಕದಲ್ಲಿ ಇಲ್ಲ ಎಂಬ ಆರೋಪವಿದೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಹದೇವಪ್ಪ, ಈ ಎಲ್ಲಾ ವಿಚಾರಗಳನ್ನು ಎಂಪಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್? ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು. ಕಳೆದ ನೂರು ವರ್ಷಗಳಿಂದ ಬಾರದ ಬರಗಾಲ ಈಗ ಬಂದಿದೆ. ಪರಿಣಾಮ ಡ್ಯಾಂಗಳಲ್ಲಿ ನೀರಿಲ್ಲದೇ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ. ಅಲ್ಲದೇ, ಪ್ರಾಧಿಕಾರಕ್ಕೂ ನಮ್ಮ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಸಿ ಮನವಿ ಮಾಡಿದ್ದೇವೆ. ನಾವು ಕಾವೇರಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕು. ಕೋರ್ಟ್ ಆದೇಶದ ವಿರುದ್ಧ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.
೨೫೦ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಎಲ್ಲ ರೀತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅವರ ಮಕ್ಕಳ ಶಿಕ್ಷಣಕ್ಕೂ ತೊಂದರೆ ಆಗದಂತೆ ಟೆಂಟ್ ಶಾಲೆಗಳನ್ನು ತೆರೆಯಲಾಗಿದೆ. ಜೊತೆಗೆ, ಈ ಬಾರಿ ನಡೆಯುವ ದಸರಾ ಸರಳವೂ ಅಲ್ಲ. ಅದ್ದೂರಿಯೂ ಅಲ್ಲ. ಸಾಂಪ್ರದಾಯಕವಾಗಿ ದಸರಾ ನಡೆಯುತ್ತದೆ. ದಸರಾದ ಮೇಲೆ ಕಾವೇರಿ ಗಲಾಟೆ ಹಾಗೂ ಬಂದ್‌ನ ವಿಚಾರಗಳು ಯಾವುದೇ ಪ್ರಭಾವ ಬೀರದಂತೆ ಕ್ರಮ ಕೈಗೊಳ್ಳಲಾಗುವುದು. ಸಾಂಪ್ರದಾಯಕ ದಸರಾ ಆಚರಣೆಗೆ ಎಲ್ಲ ರೀತಿಯ ಸಿದ್ಧತೆ ಯನ್ನ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.