ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವ ವಿಚಾರವಾಗಿ ಇದೇ ಮೊದಲ ಬಾರಿಗೆ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮೌನಮುರಿದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೈತ್ರಿ ವಿಚಾರವಾಗಿ ಅ. ೧೬ ರಂದು ಕನ್ನಡ ಮಾಧ್ಯಮಗಳ ಜತೆ ಮಾತಾಡಬೇಕು ಎಂಬ ನಿರ್ಧಾರ ಮಾಡಿದ್ದೆ. ಅಲ್ಲಿವರೆಗೆ ಅವಕಾಶ ಕೊಡಿ. ಎಲ್ಲರ ಅಭಿಪ್ರಾಯ ಪಡೆದು ಕನ್ನಡ ಮಾಧ್ಯಮಗಳ ಜೊತೆ ಮಾತಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ವಿಷಯಗಳ ಬಗ್ಗೆ ಈಗಾಗಲೇ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ನಾನೊಂದು ಪಕ್ಷದ ಅಧ್ಯಕ್ಷ. ನೀವು ದೆಹಲಿಗೆ ಹೋದಿರಿ, ನನಗೆ ಒಂದು ಮಾತು ಹೇಳಿಲ್ಲ. ಏನು ಚರ್ಚೆ ಮಾಡಿದ್ದೀರಿ, ಈವರೆಗೆ ಮಾಹಿತಿ ಬಂದಿಲ್ಲ. ಮೈತ್ರಿ ಎಲ್ಲಿ ಆಗಿದೆ? ನಾನು ಪಕ್ಷದ ಅಧ್ಯಕ್ಷ, ಪಕ್ಷದಲ್ಲಿ ಎಲ್ಲಿ ಚರ್ಚೆ ಆಗಿದೆ? ಜನತಾದಳದ ಮೂಲ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಹೋಗಿದೆ. ಅದನ್ನು ಒಪ್ಪಲು ತಯಾರಿಲ್ಲ, ಅದನ್ನು ಒಪ್ಪಿಕೊಳ್ಳಿ. ಪಕ್ಷದಲ್ಲಿ ಚರ್ಚೆ ಆಗಿ ನಿರ್ಣಯ ಆದ ಮೇಲೆ ರಾಜ್ಯಾಧ್ಯಕ್ಷನಾಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಪ್ರವಾಸ ಶುರು ಮಾಡಿಲ್ಲ, ಆಗಲೇ ಹೋಗಿ ಭೇಟಿ ಮಾಡಿ ಬಂದಿದ್ದಾರೆ ಎಂದು ಕುಮಾರಸ್ವಾಮಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅ.೧೬ರ ಸಭೆಯ ಬಳಿಕ ಪಕ್ಷದ ವರಿಷ್ಠ ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡುತ್ತೇನೆ. ಶರದ್ ಪವಾರ್ ಸೇರಿದಂತೆ ಹಲವರು ಮತ್ತು ದೆಹಲಿಯಿಂದ ಕಾಂಗ್ರೆಸ್ ನಾಯಕರು ಮಾತಾಡಿದ್ದಾರೆ. ಸಿದ್ದರಾಮಯ್ಯ ಜೊತೆ ಏನೂ ಮಾತುಕತೆ ಮಾಡಿಲ್ಲ. ಮುಸ್ಲಿಂ ನಾಯಕರು ಯಾರೂ ಪಕ್ಷ ಬಿಟ್ಟು ಹೋಗಿಲ್ಲ, ರಾಜೀನಾಮೆ ನನಗೇ ಬರಬೇಕಲ್ವಾ? ದೇವೇಗೌಡರು ತಂದೆ ಸಮಾನ, ನಾನು ಜನತಾದಳಕ್ಕೆ ಹೋಗಲು ಅವರೇ ಕಾರಣ ಎಂದು ಇಬ್ರಾಹಿಂ ಹೇಳಿದ್ದಾರೆ.