ಮಡಿಕೇರಿ : ಮಕ್ಕಳ ಆರೈಕೆ ಮತ್ತು ರಕ್ಷಣೆಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸಬೇಕು. ಆ ನಿಟ್ಟಿನಲ್ಲಿ ಬಾಲನ್ಯಾಯ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಅವರು ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲನ್ಯಾಯ ಮತ್ತು ಪೋಕ್ಸೋ ಕಾಯ್ದೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಮಕ್ಕಳ ಪಾಲನೆ ಮತ್ತು ಪೋಷಣೆಗೆ ಪೋಷಕರು ವಿಶೇಷ ಗಮನಹರಿಸಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಬಾಲನ್ಯಾಯ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸುವಂತಾಗಬೇಕು. ಬಾಲ್ಯ ವಿವಾಹ ಪ್ರಕರಣಗಳು ಕಂಡು ಬರದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಬಾಲಕರ ಹಾಗೂ ಬಾಲಕಿಯರ ಮಂದಿರದಲ್ಲಿ ಇರುವ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪ್ರವಾಸ ಕಾರ್ಯಕ್ರಮ ಏರ್ಪಡಿಸಿ ಅವರ ಕ್ರೀಯಾಶೀಲ ಚಟುವಟಿಕೆಗೆ ಪ್ರೋತ್ಸಾಹಿಸಬೇಕು ಎಂದು ಎಂ.ಜಿ.ಉಮಾ ಸಲಹೆ ಮಾಡಿದರು. ಎಲ್ಲಾ ಇಲಾಖೆಗಳ ಜೊತೆ ಸಮನ್ವಯತೆ ಸಾಧಿಸಿ ಬಾಲ್ಯ ವಿವಾಹ ತಡೆಯುವುದು ಹಾಗೂ ಮಕ್ಕಳ ಪಾಲನೆ ಮತ್ತು ಪೋಷಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನ ನಡೆಯಬೇಕು ಎಂದರು. ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣ ಗೌಡ ಅವರು ಮಾತನಾಡಿ ಮಕ್ಕಳು ರಾಷ್ಟ್ರದ ಆಸ್ತಿಯಾಗಿದ್ದು, ಮಕ್ಕಳ ಪೋಷಣೆ ಮತ್ತು ಪಾಲನೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮಕ್ಕಳು ಗಲಾಟೆ ಮಾಡುತ್ತವೆ ಎಂದು ಗುದ್ದುವುದಲ್ಲ, ತಿದ್ದಬೇಕು ಎಂದು ಸಲಹೆ ನೀಡಿದರು.’ ವಿವಿಧ ಇಲಾಖೆಗಳು ಮಕ್ಕಳ ಪಾಲನೆ ಮತ್ತು ಪೋಷಣೆ ಜೊತೆಗೆ, ಬಾಲ್ಯ ವಿವಾಹ ತಡೆಯುವಲ್ಲಿ ಸಮುದಾಯ ಜಾಗೃತಿ ಅತೀ ಮುಖ್ಯ. ಮಕ್ಕಳ ಸಂರಕ್ಷಣೆ ಮಾಡುವಲ್ಲಿ ಮಕ್ಕಳ ಜೊತೆ ಪ್ರತೀ ನಿತ್ಯ ಮಕ್ಕಳಂತೆ ನಾವು ಸಹ ಬೆರೆಯಬೇಕು ಎಂದರು.
ಬಾಲ್ಯ ವಿವಾಹ ಸಂಬಂಧ ಯಾರೂ ಬೇಕಾದರೂ ಎಫ್‌ಐಆರ್ ದಾಖಲಿಸಬಹುದು. ಬಾಲ್ಯ ವಿವಾಹ ಒಂದು ರೀತಿ ಜೈಲು ವಿವಾಹ ಎಂಬುದನ್ನು ಮರೆಯಬಾರದು ಎಂದು ಒತ್ತಿ ಹೇಳಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಅವರು ಮಾತನಾಡಿ ಮಕ್ಕಳ ರಕ್ಷಣೆ ಮತ್ತು ಪಾಲನೆ ಜೊತೆಗೆ ಬಾಲ್ಯ ವಿವಾಹ ತಡೆಯಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಬಾಲ್ಯ ವಿವಾಹ ತಡೆಯುವ ಬಗ್ಗೆ ತಹಶೀಲ್ದಾರರ ನೇತೃತ್ವದಲ್ಲಿ ನಿಯಮಾನುಸಾರ ಸಭೆ ನಡೆಸಬೇಕು. ಗ್ರಾಮ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಬಾಲ್ಯ ವಿವಾಹ ಎಂಬುದು ಕಲ್ಪನೆಯಲ್ಲಿಯೂ ಸಹ ಬರಬಾರದು ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಹಾಡಿಜನರು ಹಾಗೂ ಲೈನ್‌ಮನೆಗಳಲ್ಲಿ ವಾಸಿಸುವ ಜನರಲ್ಲಿ ಮಕ್ಕಳ ಪಾಲನೆ ಮತ್ತು ಪೋಷಣೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕಿದೆ. ಜೊತೆಗೆ ಹಾಡಿ ಜನರು ಇತರರಂತೆ ತೊಡಗಿಸಿಕೊಳ್ಳಲು ಅರಿವು ಮೂಡಿಸಬೇಕಿದೆ ಎಂದರು. ಮಕ್ಕಳ ರಕ್ಷಣಾಧಿಕಾರಿ ಈರಸ್ವಾಮಿ ಅವರು ಮಾತನಾಡಿ ಬಾಲನ್ಯಾಯ ಕಾಯ್ದೆಯಡಿ ಜಿಲ್ಲೆಯಲ್ಲಿ ೬ ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿದ್ದು, ಒಟ್ಟು ೧೧೨ ಮಕ್ಕಳು ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದರು.