ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ನಾಗಭೂಷಣ್ ಅವರ ಕಾರು ಅಪಘಾತಕ್ಕೊಳಗಾಗಿ, ಓರ್ವ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಉತ್ತರಹಳ್ಳಿಯಿಂದ ಕೋಣನಕುಂಟೆ ಕ್ರಾಸ್ ದಾರಿ ಮಧ್ಯೆ ಶನಿವಾರ ತಡರಾತ್ರಿ ೯:೪೫ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ನೇಹಿತರನ್ನು ಭೇಟಿಯಾಗಿ ಜೆ.ಪಿ ನಗರದ ತಮ್ಮ ಮನೆಗೆ ನಟ ನಾಗಭೂಷಣ್ ತೆರಳುತ್ತಿದ್ದರು. ಫುಟ್ ಪಾತ್ ಮೇಲೆ ವಾಕಿಂಗ್ ಮಾಡುತ್ತಿದ್ದ ದಂಪತಿ ರಸ್ತೆಗಿಳಿದ ಪರಿಣಾಮ ಕಾರು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತದಲ್ಲಿ ಪ್ರೇಮ (೪೮) ಸಾವನ್ನಪ್ಪಿದ್ದಾರೆ. ಮೃತರ ಪತಿ ಕೃಷ್ಣ ಅವರ ಸ್ಥಿತಿ ಗಂಭೀರವಾಗಿದೆ. ಪ್ರೇಮ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯೇ ಕೊನೆಯುಸಿರೆಳೆದರು. ಇತ್ತ ಕೃಷ್ಣ (೫೮) ಅವರು ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ನಾಗಭೂಷಣ್ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತರ ಪುತ್ರ ಪಾರ್ಥ ಎಂಬುವರು ದೂರು ಸಲ್ಲಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ಪೊಲೀಸರು ನಟನನ್ನು ವಶಕ್ಕೆ ಪಡೆದಿದ್ದಾರೆ.