ರಾಮನಗರ : ಹಿರಿಯ ನಾಗರಿಕರ ಸೌಲಭ್ಯಗಳನ್ನು ತಲುಪಿಸಲು ಅಧಿಕಾರಿಗಳು ಕ್ರಮವಹಿಸುವಂತೆ ರಾಮನಗರ ನಗರಸಭೆಯ ಅಧ್ಯಕ್ಷ ವಿಜಯಕುಮಾರಿ ರವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-೨೦೨೩ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದ ಜನ ಸಂಖ್ಯೆಯ ಶೇ.೧೨ ಕ್ಕಿಂತ ಹೆಚ್ಚು ವೃದ್ದರಿದ್ದು, ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ೭.೭೨ ರಷ್ಟು ಜನ ೬೦ ವರ್ಷ ಮೇಲ್ಪಟ್ಟಿರುತ್ತಾರೆ ಎಂದರು. ಹಿರಿಯ ನಾಗರಿಕರಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದೆ ಅವುಗಳ ಉಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ರವರು ಮಾತನಾಡಿ, ರಾಜ್ಯವು ೨೦೦೩ ರಲ್ಲಿ ಹಿರಿಯ ನಾಗರಿಕರ ಉತ್ತಮ ಜೀವನ ಮಟ್ಟವನ್ನು ಒದಗಿಸಿಕೊಡುವುದನ್ನು ಖಚಿತಪಡಿಸಕೊಳ್ಳಲು ಹಿರಿಯ ನಾಗರಿಕರ ರಾಜ್ಯ ನೀತಿ ಜಾರಿಗೆ ತಂದಿದೆ. ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯನ್ನು ೨೦೦೭ ಜಾರಿಗೊಳಿಸಿದೆ. ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೀಡುವ ಕಾರ್ಯದಲ್ಲಿ ಇಡೀ ರಾಜ್ಯಕ್ಕೆ ರಾಮನಗರ ಜಿಲ್ಲೆಯ ಪ್ರಥಮ ಸ್ಥಾನವನ್ನು ಪಡದಿದೆ ಎಂದರು.
ಇದೇ ಸಂದರ್ಭದಲ್ಲಿ, ಹಿರಿಯ ನಾಗರಿಕರಿಗೆ ಏರ್ಪಡಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೇಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಜಿಲ್ಲೆಯಲ್ಲಿರುವ ಹಿರಿಯ ನಾಗರಿಕರು ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ, ಬಿ.ಎನ್. ಕಾಡಯ್ಯ ಚನ್ನಪಟ್ಟಣ, ಸಿ.ಕೆ. ಮಾಯಿಗೇಗೌಡ ಚನ್ನಪಟ್ಟಣ, ಡಾ.ರಾಜಶೇಖರಯ್ಯ ಕೆ.ಎಂ. ಕನಕಪುರ, ವೆಂಕಟರಮಣಪ್ಪ ಕನಕಪುರ , ಹೆಚ್.ಪಿ.ರಂಗಯ್ಯ ಮಾಗಡಿ ತಾ, ಮಲ್ಲಮ್ಮ ಮಾಗಡಿ ತಾ. , ಸಾಲುಮರದ ನಿಂಗಣ್ಣ ರಾಮನಗರ ತಾ. ಹಾಗೂ ಜಯಮ್ಮ ರಾಮನಗರ ಇವುರುಗಳನ್ನು ಸನ್ಮಾನಿಸಲಾಯಿತು.
ಶತಾಯುಷಿಗಳಿಗೆ ಸನ್ಮಾನ:- ಯುವ ಮತದಾನರನ್ನು ಆಕರ್ಷಿಸುವ ಸಲುವಾಗಿ ಜಿಲ್ಲೆಯಲ್ಲಿರುವ ೧೦೦ ವರ್ಷ ಪೂರೈಸಿರುವ ಶತಾಯುಷಿ ಪುಟ್ಟಸ್ವಾಮಿ, ಜಯಮ್ಮ , ಸಾದಪ್ಪ, ಜಯಮ್ಮ ಎಂ. ಮಲ್ಲಮ್ಮ ರವರುಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ, ನಿವೃತ್ತ ನೌಕರರು , ನಿವೃತ್ತ ಪೊಲೀಸ್ ಅಧಿಕಾರಿಗಳು, ಹಿರಿಯ ನಾಗರೀಕರ ಏಳಿಗೆಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಇತರರು ಭಾಗವಹಿಸಿದ್ದರು.
