Saturday, April 19, 2025
Google search engine

Homeರಾಜ್ಯಸುದ್ದಿಜಾಲಹಿರಿಯ ನಾಗರಿಕರನ್ನು ಗೌರವದಿಂದ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ : ಶಾಸಕ ಗಣೇಶ್‍ಪ್ರಸಾದ್

ಹಿರಿಯ ನಾಗರಿಕರನ್ನು ಗೌರವದಿಂದ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ : ಶಾಸಕ ಗಣೇಶ್‍ಪ್ರಸಾದ್

ಚಾಮರಾಜನಗರ: ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಹಿರಿಯ ನಾಗರಿಕರನ್ನು ಗೌರವ, ಆದರದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್‍ಪ್ರಸಾದ್ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಹಿರಿಯ ನಾಗರಿಕ ಸಬಲೀಕರಣ ಕ್ಷೇತ್ರದಲ್ಲಿ ಭಾಗಿಯಾಗಿರುವ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ಹಿರಿಯ ನಾಗರಿಕರ ಸ್ಥಿತಿಸ್ಥಾಪಕತ್ವ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೌಟುಂಬಿಕ ವ್ಯವಸ್ಥೆಯಲ್ಲಿ ಸಹಬಾಳ್ವೆ, ಸಾಮರಸ್ಯ ಇಂದು ಮರೆಯಾಗುತ್ತಿದೆ. ಬದಲಾಗುತ್ತಿರುವ ಪರಿಸರದಿಂದ ಹಿರಿಯರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಿರಿಯರನ್ನು ಕಡೆಗಣಿಸಿ ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ವೃದ್ದಾಶ್ರಮಗಳು ತಲೆ ಎತ್ತುತ್ತಿವೆ. ಇದರ ನಿವಾರಣೆಗಾಗಿ ನಾವು ನಮ್ಮಲ್ಲಿರುವ ಕೊರತೆಗಳನ್ನು ಅರಿಯಬೇಕು. ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.

ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಸಾಕಷ್ಟು ಅನುದಾನವನ್ನು ನೀಡಿದೆ. ಅವುಗಳ ಸದ್ಭಳಕೆಯಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು. ಹಿರಿಯ ನಾಗರಿಕರನ್ನು ಕಚೇರಿಗೆ ಅಲೆದಾಡಿಸದೇ ಗೌರವದಿಂದ ನಡೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಶಾಸಕರಾದ ಗಣೇಶ್‍ಪ್ರಸಾದ್ ಅವರು ತಿಳಿಸಿದರು.

ಇದೇ ವೇಳೆ ಹಿರಿಯ ನಾಗರಿಕರಾದ ಶತಾಯುಷಿ ಪುಟ್ಟಪ್ಪ, ಜನಪದ ತತ್ವಪದ ಹಾಡುಗಾರ ಸಿದ್ದಯ್ಯನಪುರದ ವೆಂಕಟಯ್ಯ, ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಕೊಳ್ಳೇಗಾಲದ ರಾಚಪ್ಪಾಜಿ ಹಾಗೂ ಇತರೆ ಹಿರಿಯರನ್ನು ಸನ್ಮಾನಿಸಲಾಯಿತು. ಅಲ್ಲದೆ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ನಗದು ಪುರಸ್ಕಾರ, ಪ್ರಮಾಣಪತ್ರ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮೀ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ನಾಗೇಶ್, ಉಪಾಧ್ಯಕ್ಷ ಸೋಮಣ್ಣ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಶಾಸಕರಾದ ಎಚ್.ಎಂ. ಗಣೇಶ್‍ಪ್ರಸಾದ್ ಅವರು ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ಹಾಗೂ ವಿಕಲಚೇತನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್, ಬ್ರೈನ್ ಲಿಪಿ ಕಿಟ್‍ಗಳನ್ನು ವಿತರಿಸಿದರು. ಅಲ್ಲದೇ ಪ್ರತಿದಿನ 100 ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸುತ್ತಿರುವ ಹೆಲ್ಪ್ ಎಜ್ ಇಂಡಿಯಾ ಸಂಸ್ಥೆಯ ಪ್ರಚಾರದ ಬ್ಯಾನರ್‍ಗೆ ಶಾಸಕರು, ಅಧಿಕಾರಿಗಳು ಸಹಿ ಹಾಕಿದರು.

RELATED ARTICLES
- Advertisment -
Google search engine

Most Popular