ಶಿವಮೊಗ್ಗ: ಸಮುದಾಯವೊಂದರ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಿರುವ ಘಟನೆ ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಇಂದು ನಡೆದಿದೆ. ಮೂವರು ಗಾಯಗೊಂಡಿದ್ದಾರೆ. ಘಟನೆಯ ನಂತರ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ ೧೪೪ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೆರವಣಿಗೆ ನಡೆಯುತ್ತಿದ್ದಾಗ ಕಲ್ಲು ತೂರಿರುವ ಆರೋಪ ಕೇಳಿ ಬಂದಿದೆ. ಆಗ ಮೆರವಣಿಗೆಯಲ್ಲಿದ್ದವರೂ ಪ್ರತಿಯಾಗಿ ಕಲ್ಲು ತೂರಿದ್ದಾರೆ. ಪರಸ್ಪರ ಕಲ್ಲು ತೂರಾಟದ ನಂತರ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ನೆರೆದಿದ್ದ ಜನರನ್ನು ವಾಪಸ್ ಕಳುಹಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಸ್ವಲ್ಪದರಲ್ಲೇ ಅಧಿಕಾರಿ, ಸಿಬ್ಬಂದಿ ಪಾರಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.