ಮಂಡ್ಯ: ಲೋಕಸಭಾ ಸದಸ್ಯರು ನೀರಾವರಿ ಸಚಿವರನ್ನ ಭೇಟಿ ಮಾಡಿದ್ದಾರೆ. ಕೇಂದ್ರದ ಮೇಲೆ ಒತ್ತಡ ಹಾಕಲು ನಾವು ಸಿದ್ದರಿದ್ದೇವೆ ಎಂದು ಮಾಜಿ ಸಚಿವ ಆರ್. ಅಶೋಕ್ ತಿಳಿಸಿದರು.
ಕಬ್ಬಿನ ಬೆಲೆ ವಿಚಾರವಾಗಿ ಕೂಡ ರೈತರು ಪ್ರತಿಭಟನೆ ಮಾಡಿಲ್ಲ. ರೈತ ಸಂಘಟನೆ ನಿರಂತರವಾಗಿ ಕಾವೇರಿ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ನೀರನ್ನ ಹೆಚ್ಚು ಉಪಯೋಗ ಮಾಡುವವರು ಬೆಂಗಳೂರಿನ ಜನ. ಆದರೆ ಮೊದಲು ಕಹಳೆ ಊದಿದ್ದು, ಮಂಡ್ಯದ ಜನ. ಇಲ್ಲವಾದರೇ ಕದ್ದು ಮುಚ್ಚಿ ನೀರು ಬಿಡುತ್ತಿದ್ದರು. ಹೋರಾಟಕ್ಕೆ ಒಂದು ಪರಿಹಾರ ಸಿಗಬೇಕಿದೆ ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಸಭೆ ಕರೆಯುವಾಗ ನೀರು ಬಿಟ್ಟಿರುತ್ತಾರೆ. ಸಭೆಯಲ್ಲಿ ಏನು ಚರ್ಚೆ ಮಾಡಲ್ಲ. ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ರಾತ್ರೋರಾತ್ರಿ ನೀರು ಬಿಟ್ಟಿದ್ದಾರೆ. ಕೇಳಿದರೆ ಲೀಕೆಜ್ ಹೋಗುತ್ತಿದೆ ಎನ್ನುತ್ತಾರೆ. ರಾಜ್ಯ ಸರ್ಕಾರದ ಮೇಲೆ ಜನರಿಗೆ ಭರವಸೆ ಹೋಗಿದೆ. ಇಲ್ಲಿನ ವಾಲ್ ಮ್ಯಾನ್ ಕರ್ನಾಟಕನಾ ತಮಿಳುನಾಡಾ ಎಂಬ ಅನುಮಾನ ಬಂದಿದೆ ಎಂದು ಕಿಡಿಕಾರಿದರು.
ಯಾವ ಮುಲಾಜಿಗೆ ನೀರು ಬಿಡುತ್ತಿದ್ದಾರೆ. ಜನರನ್ನ ವಂಚನೆ ಮಾಡುತ್ತಿದ್ದಾರೆ. ಕಾವೇರಿ ಜೀವನದಿ. ಕಾವೇರಿ ನಮ್ಮದಲ್ಲ ಸೌತ್ ಇಂಡಿಯಾದ್ದು ಎನ್ನುತ್ತಾರೆ. ಹಾಗಾದ್ರೆ ಸ್ಟಾಲಿನ್ ನದಿ, ಪಳನಿಸ್ವಾಮಿ ನದಿ ಎಂದು ಹೆಸರು ಇಡಿ ಎಂದು ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.
ಬೆಂಗಳೂರು ಜನ ಕೂಡ ಹೋರಾಟಕ್ಕೆ ಇಳಿಯಬೇಕು. ಜನವರಿ ನಂತರ ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ. ಕುಡಿಯುವ ನೀರಿಗೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಕೆ ಆರ್ ಎಸ್ ಬಿಟ್ಟರೇ ಬದಕಲು ಸಾಧ್ಯವಿಲ್ಲ. ಬೆಂಗಳೂರು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಕದ್ದು ಮುಚ್ಚಿ ನೀರುಬಿಡುವುದಕ್ಕೆ ಅಂತ್ಯ ಹಾಡಬೇಕಿದೆ. ತಮಿಳುನಾಡಿನವರು ಬಹಳ ಆಕ್ಟೀವ್ ಆಗಿದ್ದಾರೆ. ನೀರು ಬಿಟ್ಟು ಆಮೇಲೆ ದಾಖಲೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ನಂತರ ನೀರು ಬಿಟ್ಟಿದ್ದರೇ ಆಗುತ್ತಿತ್ತು. ಆದರೆ ಕೇಳುವ ಮೊದಲೇ ನೀರು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಡೆಂಗ್ಯೂ ಜ್ವರ ಬೆಂಗಳೂರಿನಲ್ಲಿ ತುಂಬಿ ತುಳುಕುತ್ತಿದೆ. ನಮ್ಮ ಮನೆಯಲ್ಲಿ ಐದು ಜನರಿಗೆ ಬಂದಿದೆ ಎಂದರು.
ಮೈಶುಗರ್ ಫ್ಯಾಕ್ಟರಿಗೆ ಮೊಳೆ ಹೊಡೆದಿದ್ದರು. ಮೈಶುಗರ್ ಕಾರ್ಖಾನೆಗೆ ಜೀವ ಕೊಟ್ಟಿದ್ದು ಬಸವರಾಜ್ ಬೊಮ್ಮಾಯಿ ಅವರು ಎಂದು ತಿಳಿಸಿದರು.