ಮಂಗಳೂರು : ನಗರದ ಕದ್ರಿ ಕಂಬಳದಲ್ಲಿ ಬಸ್ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಹೇಶ್ ಮೋಟಾರ್ಸ್ ಬಸ್ ಮಾಲಿಕ ಪ್ರಕಾಶ್ ಶೇಖ (೪೫) ಆತ್ಮಹತ್ಯೆಗೆ ಶರಣಾದವರು. ಕದ್ರಿ ಕಂಬಳದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಇವರು ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ.
ಮೂಲತಃ ಮಂಗಳೂರಿನ ಕುಲಶೇಖರ ನಿವಾಸಿಯಾಗಿರುವ ಪ್ರಕಾಶ್ ಶೇಖ ಅವರು ಪತ್ನಿ ಹಾಗೂ ಪುತ್ರಿಯೊಂದಿಗೆ ವಾಸ್ತವ್ಯವಿದ್ದರು. ಇಂದು ಬೆಳಗ್ಗೆ ಅವರು ಸ್ವಲ್ಪಹೊತ್ತು ಮಲಗುತ್ತೇನೆಂದು ತಮ್ಮ ಕೋಣೆಗೆ ಹೋಗಿದ್ದರು. ಆದರೆ ಮಧ್ಯಾಹ್ನ ಊಟಕ್ಕೆ ಏಳದಿರುವುದನ್ನು ಕಂಡು ಮನೆಯವರು ಬಾಗಿಲು ಬಡಿದಾಗ ಬಾಗಿಲು ತೆರೆದಿರಲಿಲ್ಲ. ಆ ಬಳಿಕ ನೋಡಿದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ.
ಬಸ್ ಉದ್ಯಮದ ಬಗ್ಗೆ ಅಪಾರ ಪ್ರೀತಿ ಇರಿಸಿದ್ದ ಪ್ರಕಾಶ್ ಶೇಖ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಅವರ ಪತ್ನಿ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.