ಧಾರವಾಡ : ದೇಶದ ಎಲ್ಲ ಜನರು ಒಂದೇ ಭಾವನೆಯಿಂದ ಜೀವನ ನಡೆಸಬೇಕು. ಬೌದ್ಧ, ಜೈನ್, ಮುಸ್ಲಿಂ, ಸಿಖ್ ಸೇರಿದಂತೆ ಎಲ್ಲ ಧರ್ಮದವರು ಒಂದೇ. ಮಹಾತ್ಮ ಗಾಂಧೀಜಿಯವರ ಜೊತೆ ಮೌಲಾನಾ ಅಬ್ದುಲ್ ಕಲಾಂ ಅಜಾದ್, ಭಗತಸಿಂಗ್, ಚಂದ್ರಶೇಖರ ಅಜಾದ್, ನೆಹರೂ, ಅಂಬೇಡ್ಕರ್ ಸೇರಿದಂತೆ ಎಲ್ಲ ಧರ್ಮದ ಮಹಾನ ನಾಯಕರು ಒಗ್ಗಟ್ಟಿನಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.
ಇಂದು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ಗಾಂಧೀ ಭಜನೆ, ಸರ್ವಧರ್ಮ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ದಯವೇ ಧರ್ಮದ ಮೂಲ ಎಂಬ ವಾಕ್ಯದಡಿ ಗಾಂಧೀಜಿಯವರು ಸಹ ಸಾಗಿದರು. ಭಗವದ್ಗೀತೆ, ಕುರಾನ್, ಬೈಬಲ್ ಹಾಗೂ ಗಾಂಧೀಜಿಯವರ ತತ್ವಗಳು ಅಹಿಂಸಾವಾದಿಯಾಗಿ ಇಡೀ ಜಗತ್ತಿಗೆ ಮಾದರಿಯಾಗಿವೆ. ಅವರು ಸ್ವಾತಂತ್ರ್ಯವನ್ನು ಅಹಿಂಸಾ ಮೂಲಕ ಭಾರತಕ್ಕೆ ದೊರಕಿಸುವಲ್ಲಿ ಶ್ರಮಿಸಿದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಹಸಿರು ಕ್ರಾಂತಿ, ಬಿಳಿ ಕ್ರಾಂತಿ ಮೂಲಕ ಜನರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿಕೊಟ್ಟರು. ಜೈ ಜವಾನ್ ಜೈ ಕಿಸಾನ್ ಘೋಷಣೆಗಳ ಮೂಲಕ ದೇಶದಲ್ಲಿ ಸಂಚಲನವನ್ನು ಮೂಡಿಸಿದವು. ದೇಶದ ಬೆನ್ನೆಲುಬು ರೈತರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಕ್ರಾಂತಿಯನ್ನು ಮಾಡಿದರು. ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಗಾಂಧೀಜಿಯವರು ವಕೀಲ ವೃತ್ತಿಯಲ್ಲಿ ತೊಡಗಿದರು. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಗಾಂಧೀಜಿಯವರು ಸ್ವಾತಂತ್ರ ಹೋರಾಟದಲ್ಲಿ ಧುಮುಕಿದರು ಎಂದು ತಿಳಿಸಿದರು.
ಗಾಂಧಿ ಚಿಂತಕರು ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಸಂಜೀವ ಕುಲಕರ್ಣಿ ಮಾತನಾಡಿ, 2007 ರಿಂದ ಅಹಿಂಸಾ ದಿವಸವನ್ನು ಆಚರಣೆ ಮಾಡಲಾಗುತ್ತಿದೆ. ಗಾಂಧೀಜಿಯವರು ಪ್ರತಿಯೊಂದು ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಸ್ವಚ್ಛತೆ, ಆಧ್ಯಾತ್ಮ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜೀವನದುದ್ದಕ್ಕೂ ವಿವಿಧ ಕಾರ್ಯದಲ್ಲಿ ತೊಡಗಿದ್ದರು. ದಕ್ಷಿಣ ಆಫ್ರಿಕಾದಿಂದ ಮರಳಿ ಭಾರತಕ್ಕೆ ಬಂದು ಚರಕದ ಮೂಲಕ ಖಾದಿ ಕ್ರಾಂತಿಗೆ ನಾಂದಿ ಹಾಡಿದರು. ಹಳ್ಳಿ ಹಳ್ಳಿಗೆ ಹೋಗಿ ಖಾದಿ ಬಗ್ಗೆ ಪ್ರಚಾರ ಮಾಡಿದರು. 1925 ರಲ್ಲಿ ಅಖಿಲ ಭಾರತ ಸ್ಪರ್ಧೆಯನ್ನು ಏರ್ಪಡಿಸಿ ಯಶಸ್ಸು ಕಂಡರು. 1932 ರಲ್ಲಿ ಪುನಃ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಚರಕದಿಂದ ನೂಲು ತೆಗೆಯುವ ಕಾರ್ಯಕ್ಕೆ ಒತ್ತು ನೀಡಿದರು. ಚರಕವನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯಗಳು ಆಗಬೇಕಿವೆ. ಗಾಂಧೀಜಿಯವರ ಹಿರಿಮೆ ಅಗಾಧವಾದದು. ಪರಿಸರ ಸ್ನೇಹಿ ಶೌಚಾಲಯ, ಖಾದಿ, ಆಹಾರ ಪದ್ಧತಿ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಜನರಿಗೆ ಪರಿಚಯಿಸಿದರು. ಪರಿಸರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜಿಲ್ಲೆಯಲ್ಲಿ 50 ಚರಕಗಳನ್ನು ಒಂದೆಡೆ ಇಟ್ಟು ಮಕ್ಕಳಿಗೆ ಅದರ ಮಹತ್ವ ಹಾಗೂ ತರಬೇತಿ ನೀಡಬೇಕಾಗಿದೆ. ಅವರ ಸಾಧನೆಗಳು ಆಚರಣೆಗೆ ಸಿಮೀತವಾಗಬಾರದು ಎಂದರು.
