Saturday, April 5, 2025
Google search engine

Homeರಾಜಕೀಯಪಠ್ಯ ಪರಿಷ್ಕರಣೆ ಯಾವುದೇ ಪಕ್ಷದ ಪರ ವಿರುದ್ಧವಲ್ಲ; ಮಕ್ಕಳ ಉತ್ತಮ ಭವಿಷ್ಯವೇ ನಮ್ಮ ಉದ್ದೇಶ: ಸಚಿವ...

ಪಠ್ಯ ಪರಿಷ್ಕರಣೆ ಯಾವುದೇ ಪಕ್ಷದ ಪರ ವಿರುದ್ಧವಲ್ಲ; ಮಕ್ಕಳ ಉತ್ತಮ ಭವಿಷ್ಯವೇ ನಮ್ಮ ಉದ್ದೇಶ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಪಠ್ಯ ಪರಿಷ್ಕರಣೆ ಯಾವುದೇ ಪಕ್ಷದ ಪರ ವಿರುದ್ಧ ಅಂತ ಅಲ್ಲ. ಮಕ್ಕಳ‌ಉತ್ತಮ ಭವಿಷ್ಯವೇ ನಮ್ಮ ಉದ್ದೇಶ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಹೇಳಿದರು.

ಇಂದು ನಗರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನನ್ನ ಶಾಲೆ ನನ್ನ ಕೊಡುಗೆ ಅಡಿಯಲ್ಲಿ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ  ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಿಸಿರುವ ಮಾದರಿ ಸರ್ಕಾರಿ ಶಾಲೆ ಮತ್ತು ನೂತನ ಶಾಲಾ ಕೊಠಡಿಗಳು ಹಾಗೂ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣವನ್ನು ನೀಡುವ ಕೆಲಸ ಪುಣ್ಯದ ಕೆಲಸ. ನಮ್ಮ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯನ್ನು ನನ್ನ ಮೇಲೆ ವಿಶ್ವಾಸವಿಟ್ಟು, ನಾನು ಚೆನ್ನಾಗಿ ನಿಭಾಯಿಸುವ ವಿಶ್ವಾಸ ಇಟ್ಟಿದ್ದಾರೆ. ಈ ಇಲಾಖೆಯನ್ನು ನಾನು ಬಹಳ ಹೆಮ್ಮೆಯಿಂದ, ಸಂತೋಷದಿಂದ ಮುಂದುವರೆಸಿಕೊಂಡು ಹೋಗುತ್ತೇನೆ. ಈ ಇಲಾಖೆಯ ಜವಾಬ್ದಾರಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಮೊದಲಿಗೆ ನನಗೆ ಈ ಇಲಾಖೆ ಕೊಟ್ಟಿರಲಿಲ್ಲ. ಅದು ಮುನಿಯಪ್ಪ ಸಾಹೇಬರಿಗೂ ಗೊತ್ತು. ಬೇರೆ ಇಲಾಖೆ ಕೊಟ್ಟಿದ್ದರು. ನಮ್ಮನ್ನು ಯಾಕೆ ಸಚಿವರನ್ನಾಗಿ ಆಯ್ಕೆ ಮಾಡಿದರೂ ಅನ್ನೋದನ್ನ ಬೇರೆ ಶಾಸಕರಿಗೆ ಹೇಳಬೇಕಾಗುತ್ತದೆ. ನಮ್ಮ ತಂದೆ ಬಂಗಾರಪ್ಪಾಜಿಯವರು ಇಡೀ ದೇಶದಲ್ಲಿ ರೈತರ ಬೋರ್‌ವೆಲ್ ಗಳಿಗೆ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಅವರು ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಮಾಡಿದ  ಆದೇಶದಿಂದ ಇವತ್ತು ನಮ್ಮ ರೈತರ ಬದುಕು ಹಸಿರಾಗಿದೆ. ಬಹಳಷ್ಟು ಯೋಜನೆಗಳನ್ನು ಅವರು ನೀಡಿದ್ದಾರೆ. ಆಶ್ರಯ, ಆರಾಧನಾ ಹೀಗೆ ಗ್ರಾಮೀಣ ಭಾಗದ ಜನರಿಗೆ ಹಲವು ಯೋಜನೆ ನೀಡಿದ್ದಾರೆ‌. ಅವರ ಮಗನಾಗಿ ನಾನು ಶಿಕ್ಷಣ ಇಲಾಖೆ ಸಚಿವನಾಗಿದ್ದೇನೆ. ಇದು ನನ್ನ ಪುಣ್ಯ ಎಂದರು.

ನನಗೆ ಚುನಾವಣೆಯ ಸಮಯದಲ್ಲಿ ಒಂದು ಜವಾಬ್ದಾರಿ ಕೊಟ್ಟಿದ್ದರು. ಚುನಾವಣಾ ಪ್ರಣಾಳಿಕೆ ರಚನಾ ಸಮಿತಿಯ ಉಪಾಧ್ಯಕ್ಷನಾಗಿದ್ದೆ. ಈಗ ನಿಮಗೆ ನೀಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾನಕ್ಕೂ ಮುಂಚೆಯೇ ನಾವು ಚಿಂತನೆ ಮಾಡಿದ್ದೇವು. ನೀವು ನೀಡಿದ ಆಶೀರ್ವಾದದಿಂದ ರಾಜ್ಯದಲ್ಲಿ 136 ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾವು ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. 130 ದಿನಗಳಲ್ಲಿ ಮತದಾರನಿಗೆ ನೀಡಿದ ಭರವಸೆಯನ್ನು ಹಂತ ಹಂತವಾಗಿ ನಮ್ಮ ಸರ್ಕಾರ ಈಡೇರಿಸುವ ಕೆಲಸ ಮಾಡುತ್ತಿದೆ. ಇನ್ನೂ ಕೆಲವು ಗ್ಯಾರಂಟಿಗಳು ಉಳಿದಿವೆ. ಅವುಗಳನ್ನು ಈಡೇರಿಸುವ ಮ‌ೂಲಕ ನೀವು ಇಟ್ಟಿರುವ ವಿಶ್ವಾಸ ಉಳಿಸಿಕೊಂಡು ಹೋಗುತ್ತೇವೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆಯನ್ನು ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ನಾನು ಅಧಿಕಾರ ಸ್ವೀಕರಿಸಿದ ಬಳಿಕ ಪಠ್ಯ ಪರಿಷ್ಕರಣೆಗೆ ಮೊದಲ ಸಹಿ ಮಾಡಿದ್ದೇನೆ. ನನಗೆ ಜವಾಬ್ದಾರಿ ಇದೆ.  ಯಾವುದೇ ಪಕ್ಷದ ಪರ, ವಿರುದ್ಧ ಅಂತ ಇಲ್ಲಿ ತೀರ್ಮಾನ ತೆಗೆದುಕೊಂಡಿಲ್ಲ. ಇಲ್ಲಿ ನಮ್ಮ ಉದ್ದೇಶ, ಮಕ್ಕಳ ಭವಿಷ್ಯಕ್ಕಾಗಿ ಆ ಕೆಲಸವನ್ನು ನಾನು ಪ್ರಾಮಾಣಿಕವಾಗಿ  ಮಾಡುತ್ತಿದ್ದೇನೆ ಎಂದರು.

ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿಯೂ ಮೊದಲು ಭೇದಭಾವ ಮಾಡಲಾಗುತ್ತಿತ್ತು. ನಾವು 8 ತರಗತಿಯಿಂದ ಹತ್ತನೇ ತರಗತಿಯ ಮಕ್ಕಳವರೆಗೂ ವಾರಕ್ಕೆ ಎರಡು ಮೊಟ್ಟೆ ಕೊಡುವ ವ್ಯವಸ್ಥೆ ಮಾಡಿದ್ದೇವೆ. ಸಿದ್ದರಾಮಯ್ಯ ಅವರ ಗಮನಕ್ಕೆ ಈ ವಿಚಾರ ತಂದಾಗ ಅವರು ಸುಮ್ಮನಾಗಲಿಲ್ಲ. ಯಾರದರೂ ಹಸುವಿನಿಂದ ಇದ್ದಾರೆ ಎಂದರೆ, ಅವರಿಗೆ ಮೊದಲು ಸಹಾಯ ಮಾಡಲು‌ ಮುಂದೆ ಬರುತ್ತಾರೆ. ಮುನಿಯಪ್ಪ ಸಾಹೇಬರ ಜೊತೆಗೆ ಮಾತನಾಡಿ ಕೂಡಲೇ ಮೊಟ್ಟೆ, ಬಾಳೆ ಹಣ್ಣು, ಚುಕ್ಕಿ ನೀಡಲು ಆದೇಶ ಹೊರಡಿಸಿದರು. ಬಡವರ ಮಕ್ಕಳಿಗೆ ಅನ್ನದ ಜೊತೆಗೆ ಮೊಟ್ಟೆ ವಿತರಣೆ ಕೆಲಸ ರಾಜ್ಯದಲ್ಲಿ ಆಗುತ್ತಿದೆ. ಸಾಹುಕಾರನ ಹತ್ತಿರ ದುಡ್ಡು ಇದ್ದರೆ, ಅದು ಬ್ಯಾಂಕ್‌ನಲ್ಲಿರುತ್ತದೆ.‌ ಅದೇ ಬಡವರ ಹತ್ತಿರ ಇದ್ದರೆ ಚಲಾವಣೆಯಲ್ಲಿರುತ್ತದೆ. ಅದರಿಂದ ರಾಜ್ಯದಲ್ಲಿ ಆರ್ಥಿಕತೆ ಹೆಚ್ಚಾಗುತ್ತದೆ ಎಂದರು.

ಮಕ್ಕಳು ಫೇಲ್ ಮಾಡಬಾರದು. ಮಕ್ಕಳಿಗೆ ಏನು ತೊಂದರೆ ಆಗುತ್ತಿದೆ ಅನ್ನೋದು ಗೊತ್ತಾಗಲೇ ಪರೀಕ್ಷೆ ಮಾಡುತ್ತೇವೆ. ಪರೀಕ್ಷೆಯಲ್ಲಿ ಫೇಲ್ ಆದ ಮಕ್ಕಳು ಶಾಲೆಯನ್ನು ತೊರೆಯುತ್ತಾರೆ. ಹೀಗಾಗಿ ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ. ಅದು ಆಗಬಾರದು ಎಂದು ನಾವು ಈ‌ ಬಾರಿ ಪೂರಕ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಇದು ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದರು.

ಸಚಿವರಾದ ಕೆ‌ ಎಚ್ ಮುನಿಯಪ್ಪ, ಶಾಸಕರಾದ ಶರತ್ ಬಚ್ಚೇಗೌಡ, ಧೀರಜ್ ಮುನಿರಾಜ್, ಎಂಎಲ್ಸಿಗಳಾದ ಎಸ್ ರವಿ, ಅ ದೇವೇಗೌಡ ಸೇರಿದಂತೆ ಮತ್ತಿತರರ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular